ಮುಂಬಯಿ: ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದಿಂದ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 45೫ ಅಂಕ ಏರಿಕೆ (Sensex) ದಾಖಲಿಸಿತು. 60,571 ಅಂಕಗಳಿಗೆ ಸ್ಥಿರವಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 130 ಅಂಕಗಳ ಏರಿಕೆ ದಾಖಲಿಸಿ 18,066ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಎಫ್ಎಂಸಿಜಿ, ಬ್ಯಾಂಕಿಂಗ್, ಮೆಟಲ್ ಮತ್ತು ಗ್ರಾಹಕ ಬಳಕೆಯ ವಸ್ತುಗಳ ಉತ್ಪಾದನೆಯ ಕಂಪನಿಗಳ ಷೇರುಗಳು ಲಾಭ ಗಳಿಸಿತು. ತಂತ್ರಜ್ಞಾನ ಮತ್ತು ತೈಲ ಕಂಪನಿಗಳ ಷೇರು ದರ ಸ್ವಲ್ಪ ಇಳಿಕೆಯಾಯಿತು.
ನಿನ್ನೆ ಸಂಜೆ ಮಾರುಕಟ್ಟೆ ಅವಧಿ ಮುಗಿದ ಮೇಲೆ ಪ್ರಕಟವಾಗಿದ್ದ ಭಾರತದ ರಿಟೇಲ್ ಹಣದುಬ್ಬರ ಹಾಗೂ ಕೈಗಾರಿಕಾ ಉತ್ಪನಗಳ ಬೆಳವಣಿಗೆ ದರದ ಅಂಕಿಅಂಶಗಳು ನಕಾರಾತ್ಮಕವಾಗಿ ಬಂದರೂ ಇಂದಿನ ಮಾರುಕಟ್ಟೆಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.
ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳ, ಷೇರು ಪೇಟೆ ಮೇಲೆ ಎಫೆಕ್ಟ್? ಅಮೇರಿಕಾದ ಹಣದುಬ್ಬರ ಆಗಸ್ಟ್‌ನಲ್ಲಿ 8.3%ಕ್ಕೆ ಜಿಗಿದಿದೆ. 8.1 % ನಿರೀಕ್ಷಿಸಲಾಗಿತ್ತು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಮುಂದಿನ ವಾರ ನಡೆಯುವ ಫೆಡರಲ್ ಬ್ಯಾಂಕ್ ಸಭೆಯಲ್ಲಿ ಬಡ್ಡಿದರ ನಿರೀಕ್ಷೆಗೂ ಮೀರಿ 0.75% ಕ್ಕಿಂತ ಹೆಚ್ಚು ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೇರಿಕದಲ್ಲಿ ಷೇರು ಸೂಚ್ಯಂಕಗಳು ತುಂಬಾ ಕೆಳಮಟ್ಟದಲ್ಲಿ ವಹಿವಾಟು ಆರಂಭಿಸಿದ್ದು, ಬಹುತೇಕ ಎಲ್ಲ ಪ್ರಮುಖ ಷೇರುಗಳು ಒತ್ತಡಕ್ಕೆ ಒಳಗಾಗಿ ಮಾರಾಟವಾಗುತ್ತಿವೆ. ಅದೇ ರೀತಿ ಸಿಂಗಾಪುರದ ಎಸ್ ಜಿಎಕ್ಸ್ ನಿಫ್ಟಿ ಈಗಾಗಲೇ ಇಳಿಕೆ ದಾಖಲಿಸಿದೆ. ಇಂದು ಅಮೇರಿಕಾದ ಮಾರುಕಟ್ಟೆ ಯಾವ ರೀತಿ ಮುಕ್ತಾಯಗೊಳ್ಳುತ್ತದೆ ಎಂಬುದರ ಮೇಲೆ ನಾಳೆ ( ಸೆ.13) ಭಾರತೀಯ ಷೇರು ಮಾರುಕಟ್ಟೆಯ ಸ್ಥಿತಿಗತಿ ನಿರ್ಧಾರವಾಗಲಿದೆ ಎನ್ನುತ್ತಾರೆ ತಜ್ಞರು.