ಮುಂಬಯಿ: ಅದಾನಿ ಸಮೂಹದ ಕಂಪನಿಗಳ ಷೇರುಗಳ ಭಾರಿ ದರ ಕುಸಿತದ ಪರಿಣಾಮ ಕಳೆದ ಕೆಲ ದಿನಗಳಿಂದ ಅಲ್ಲೋಲಕಲ್ಲೋಲವಾಗಿದ್ದ ಮಾರುಕಟ್ಟೆಯಲ್ಲಿ (Stock market) ಶುಕ್ರವಾರ ಸೆನ್ಸೆಕ್ಸ್ (sensex) ಮತ್ತು ನಿಫ್ಟಿಯ (Nifty) ಹೈಜಂಪ್ ನಿರಾಳ ಮೂಡಿಸಿತ್ತು. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಭರ್ಜರಿ ಷೇರು ವಿಕ್ರಯವಾಯಿತು. ಸೆನ್ಸೆಕ್ಸ್ 909 ಅಂಕ ಏರಿಕೆಯಾಗಿ 60,841 ಕ್ಕೆ ದಿನ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 243 ಅಂಕ ಜಿಗಿದು 17,854ಕ್ಕೆ ಸ್ಥಿರವಾಯಿತು. ಟೈಟನ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಮಹೀಂದ್ರಾ &ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಲಾಭ ಗಳಿಸಿತು. ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೊ, ಮಹೀಂದ್ರಾ ಷೇರುಗಳು ನಷ್ಟಕ್ಕೀಡಾಯಿತು.
ಫೊರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 34 ಪೈಸೆ ಏರಿಕೆಯಾಯಿತು. (81 ರೂ.) ಏಷ್ಯಾದಲ್ಲಿ ಸೋಲ್, ಟೋಕಿಯೊದ ಮಾರುಕಟ್ಟೆಯಲ್ಲಿ ಸೂಚ್ಯಂಕ ಜಿಗಿಯಿತು. ಅಮೆರಿಕದಲ್ಲಿ ಕೂಡ ಸಕಾರಾತ್ಮಕವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 82 ಡಾಲರ್‌ಗೆ ಏರಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 3,065 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದರು.
ಅದಾನಿ ಎಂಟರ್‌ಪ್ರೈಸ್ ದರ ಕುಸಿತ: ಹಿಂಡೆನ್ ಬರ್ಗ್ ಸ್ಫೋಟಕ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳು ತೀವ್ರ ಕುಸಿದಿದ್ದು, ಶುಕ್ರವಾರ ಅದಾನಿ ಎಂಟರ್‌ಪ್ರೈಸಸ್ ಷೇರು ದರ 34% ಇಳಿಕೆ ದಾಖಲಿಸಿತು. ಅದಾನಿ ಪೋರ್ಟ್ಸ್ ಷೇರು ದರ ೫.೬೧% ಏರಿಕೆಯೊಂದಿಗೆ ಸ್ಥಿರವಾಯಿತು. ಅದಾನಿ ಪವರ್ ಷೇರು ದರ 10.10% ಇಳಿಯಿತು. ಅಂಬುಜಾ ಸಿಮೆಂಟ್ ದರದಲ್ಲಿ 5.56% ಏರಿಕೆಯಾಯಿತು.