ಮುಂಬಯಿ: ಪ್ರಸಕ್ತ ಸಾಲಿನ, ಅಂದರೆ 2022-23ರ ಕೊನೆ ದಿನವಾದ ಶುಕ್ರವಾರ ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕ ಜಿಗಿಯಿತು. (Stock Market) ಸೆನ್ಸೆಕ್ಸ್ 59 ಸಾವಿರ ಅಂಕಗಳ ಗಡಿಗೆ ಸಮೀಪಿಸಿದರೆ, ನಿಫ್ಟಿ 279 ಅಂಕ ಜಿಗಿದು 17,359ಕ್ಕೆ ವೃದ್ಧಿಸಿತು. ಹೂಡಿಕೆದಾರರ ಸಂಪತ್ತಿನಲ್ಲಿ 3.48 ಲಕ್ಷ ಕೋಟಿ ರೂ.ಗಳ ಏರಿಕೆಯಾಯಿತು. ಅಂದರೆ ಬಿಎಸ್ಇನ ಎಲ್ಲ ನೋಂದಾಯಿತ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 258 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. ಬಿಎಸ್‌ಇನಲ್ಲಿ 2400 ಷೇರುಗಳು ಲಾಭ ಗಳಿಸಿತು. ಷೇರು ಪೇಟೆಯ ಸಂಭ್ರಮಕ್ಕೆ ಕಾರಣವೇನು? ಇಲ್ಲಿದೆ ವಿವರ.
ರಿಲಯನ್ಸ್ ಇಂಡಸ್ಟ್ರೀಸ್, ನೆಸ್ಲೆ, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ ಮತ್ತು ಎಕ್ಸಿಸ್ ಬ್ಯಾಂಕ್ ಷೇರುಗಳ ದರದಲ್ಲಿ ಏರಿಕೆ ದಾಖಲಾಯಿತು. ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್ ಷೇರು ದರವೂ ಗಳಿಕೆ ದಾಖಲಿಸಿತು.
ಜಾಗತಿಕ ಮಾರುಕಟ್ಟೆಯ ಚೇತರಿಕೆ: ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಉಪಶಮನವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ-ಯುರೋಪ್‌ನಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು. ಡವ್ ಜಾನ್ಸ್, ಎಸ್&ಪಿ, ನಾಸ್ ಡಾಕ್ ಕಂಪೊಸಿಟ್ ಸೂಚ್ಯಂಕ ಏರಿತು. ಏಷ್ಯಾ-ಪೆಸಿಫಿಕ್ ವಲಯದಲ್ಲೂ ವೃದ್ಧಿಸಿತು.
ಎಫ್‌ಐಐ ಖರೀದಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,245 ಕೋಟಿ ರೂ. ಮೌಲ್ಯದ ಷೇರುಗಳನ್ನು ಬುಧವಾರ ಖರೀದಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ : ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ 4.3% ಏರಿತು. (2,331 ರೂ.)
ತಾಂತ್ರಿಕ ಅಂಶ: ಷೇರುಪೇಟೆಯ ಟೆಕ್ನಿಕಲ್ ತಜ್ಞರ ಪ್ರಕಾರ, ನಿಫ್ಟಿಗೆ 16,900 ಅಂಕಗಳು ಉತ್ತಮ ಬೆಂಬಲ ನೀಡಿತು.
ಪ್ರಮುಖ ವಲಯಗಳ ಉದ್ದಿಮೆಗಳ 6% ಬೆಳವಣಿಗೆ:
ಕಳೆದ ಫೆಬ್ರವರಿಯಲ್ಲಿ 8 ಮೂಲ ಸೌಕರ್ಯ ವಲಯದ ಉದ್ದಿಮೆಗಳ ಬೆಳವಣಿಗೆ 6%ಕ್ಕೆ ಏರಿಕೆಯಾಗಿತ್ತು. ಇದು ಜನವರಿಯಲ್ಲಿ 7.8% ವೃದ್ಧಿಸಿತ್ತು. ರಸಗೊಬ್ಬರ, ಕಲ್ಲಿದ್ದಲು, ವಿದ್ಯುತ್, ಸಿಮೆಂಟ್, ಉಕ್ಕು, ಸಂಸ್ಕರಿತ ಉತ್ಪನ್ನ, ನೈಸರ್ಗಿಕ ಅನಿಲ ವಲಯದ ಬೆಳವಣಿಗೆ ದಾಖಲಾಗಿತ್ತು.
ಭಾರತದ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣದಲ್ಲಿ 2023ರ ಮಾರ್ಚ್ 24ರ ವೇಳೆಗೆ 5.98 ಶತಕೋಟಿ ಡಾಲರ್ (49,036 ಕೋಟಿ ರೂ.) ಏರಿದ್ದು, 578 ಶತಕೋಟಿ ಡಾಲರ್‌ಗೆ (47 ಲಕ್ಷ ಕೋಟಿ ರೂ.) ವೃದ್ಧಿಸಿದೆ. ಭಾರತದ ಚಿನ್ನದ ಸಂಗ್ರಹದ ಮೌಲ್ಯದಲ್ಲಿ 1.37 ಶತಕೋಟಿ ಡಾಲರ್ (11,234 ಕೋಟಿ ರೂ.) ಏರಿದ್ದು, 45.48 ಶತಕೋಟಿ ಡಾಲರ್‌ಗೆ ತಲುಪಿದೆ. (3.72 ಲಕ್ಷ ಕೋಟಿ ರೂ.)
ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಭಾರತದ ವಿತ್ತೀಯ ಕೊರತೆ (current account deficit) ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿಯ 2.2%ಕ್ಕೆ ಇಳಿಕೆಯಾಗಿದೆ. ಸೇವಾ ವಲಯದ ರಫ್ತು ಈ ಅವಧಿಯಲ್ಲಿ 24.5% ಏರಿಕೆಯಾಗಿತ್ತು.