Site icon Vistara News

ಸೆನ್ಸೆಕ್ಸ್‌ 1,457 ಅಂಕಗಳ ಮಹಾ ಪತನ, ರೂಪಾಯಿ ದಾಖಲೆಯ 78.29ಕ್ಕೆ ದುರ್ಬಲ

stock trader

ಸೆನ್ಸೆಕ್ಸ್‌ ಭಾರಿ ಕುಸಿತಕ್ಕೆ ಕಾರಣವೇನು?

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆ ಸೋಮವಾರ ಅಲ್ಲೋಲಕಲ್ಲೋಲವಾಗಿದ್ದು, ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬೆಳಗ್ಗಿನ ವಹಿವಾಟಿನಲ್ಲಿ 1,457 ಅಂಕಗಳನ್ನು ಕಳೆದುಕೊಂಡು ತತ್ತರಿಸಿತು. ಹೂಡಿಕೆದಾರರಿಗೆ ಒಂದೇ ದಿನ 5.47 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿತು.

ಡಾಲರ್‌ ಎದುರು ರೂಪಾಯಿ ಸಾರ್ವಕಾಲಿಕ ಕುಸಿತಕ್ಕೀಡಾಯಿತು. 78.28 ರೂ.ಗೆ ಕುಸಿಯಿತು. ಬಜಾಜ್‌ ಫಿನ್‌ಸರ್ವ್‌, ಬಜಾಜ್‌ ಫೈನಾನ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ದರ ಕುಸಿಯಿತು.

ಸೆನ್ಸೆಕ್ಸ್‌ ಬೆಳಗ್ಗೆ 10 ಗಂಟೆಯ ವೇಳೆಗೆ 1,488 ಅಂಕ ಕಳೆದುಕೊಂಡು 52,781ಕ್ಕೆ ಇಳಿದಿತ್ತು. ನಿಫ್ಟಿ 432 ಅಂಕ ಕಳೆದುಕೊಂಡು 15,769ರಲ್ಲಿತ್ತು. ಅಂತಿಮವಾಗಿ ಸೆನ್ಸೆಕ್ಸ್‌ 1457 ಅಂಕ ಕಳೆದುಕೊಂಡು 52,846ಕ್ಕೆ ಸ್ಥಿರವಾಯಿತು. ನಿಫ್ಟಿ 427 ಅಂಕ ಕಳೆದುಕೊಂಡು 15,774ಕ್ಕೆ ಸ್ಥಿರವಾಯಿತು.

ಅಮೆರಿಕದಲ್ಲಿ ಕಳೆದ ಮೇನಲ್ಲಿ ಹಣದುಬ್ಬರ 8.6%ಕ್ಕೆ ಜಿಗಿದಿದ್ದು, ಕಳೆದ 40 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಅಂಕಿ ಅಂಶಗಳು ಜಾಗತಿಕ ಷೇರು ಮಾರುಕಟ್ಟೆಯನ್ನು ಅಯೋಮಯಗೊಳಿಸಿತು.

ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಮತ್ತಷ್ಟು ಏರಿಸಲಿದೆ ಎಂಬ ಭೀತಿಯಿಂದ ಷೇರು ಪೇಟೆ ಮುಗ್ಗರಿಸಿತು.

ಚೀನಾದ ಬೀಜಿಂಗ್‌ನಲ್ಲಿ ಕೋವಿಡ್‌ ಅಲೆ ಮತ್ತೆ ಮರುಕಳಿಸಿರುವುದು ಕೂಡ ನಕಾರಾತ್ಮಕ ಪ್ರಭಾವ ಬೀರಿತು. ಏಷ್ಯಾದ ಷೇರು ಸೂಚ್ಯಂಕಗಳು 2.7% ಕುಸಿಯಿತು.

ಎಲ್‌ಐಸಿ ಷೇರು ದರ ಪತನ

ಎಲ್‌ಐಸಿ ಷೇರು ದರ ಸೋಮವಾರ ಬೆಳಗ್ಗೆ ಮೊದಲ ಬಾರಿಗೆ 700 ರೂ.ಗಿಂತಲೂ ಕೆಳಕ್ಕಿಳಿಯಿತು. 10 ಗಂಟೆಯ ವೇಳೆಗೆ 681 ರೂ.ಗೆ ಪತನವಾಯಿತು. ಐಪಿಒ ದರಕ್ಕಿಂತ 28% ಕೆಳಕ್ಕಿಳಿದಿದೆ. ಎಲ್‌ಐಸಿಯ ಷೇರು ಮಾರುಕಟ್ಟೆ ಮೌಲ್ಯ 4,34,052 ಕೋಟಿ ರೂ.ಗೆ ಇಳಿಕೆಯಾಗಿದೆ. ಐಪಿಒ ದರ 949 ರೂ. ಇತ್ತು.

ಆಂಕರ್‌ ಹೂಡಿಕೆದಾರರಿಗೆ 30 ದಿನಗಳ ಲಾಕ್‌ ಇನ್‌ ಅವಧಿ ಸೋಮವಾರ ಮುಕ್ತಾಯವಾಗುತ್ತಿದೆ. ಇದರೊಂದಿಗೆ ಆಂಕರ್‌ ಹೂಡಿಕೆದಾರರು ತಾವು ಹೊಂದಿರುವ ಎಲ್‌ಐಸಿ ಷೇರುಗಳನ್ನು ಮಾರಾಟ ಮಾಡಬಹುದು.

Exit mobile version