Site icon Vistara News

Stock Market: ಅಮೆರಿಕದಲ್ಲಿ ಹಣದುಬ್ಬರ ಭೀತಿ; ಸೆನ್ಸೆಕ್ಸ್‌ 700 ಪಾಯಿಂಟ್‌ ಕುಸಿತ, ಭಾರಿ ನಷ್ಟ

Sensex Falls

Sensex Opens 700 Points Lower Amid Worries Over US Inflation

ಮುಂಬೈ: ಅಮೆರಿಕದಲ್ಲಿ ಹಣದುಬ್ಬರ (US Inflation) ಏರಿಕೆಯಾಗುವ ಹಾಗೂ ಹಣದುಬ್ಬರದ ವರದಿ ನೀಡಲು ವಿಳಂಬವಾಗುತ್ತಿರುವ ಕಾರಣ ಭಾರತದ ಷೇರು ಮಾರುಕಟ್ಟೆಯಲ್ಲಿ (Indian Stock Market) ಭಾರಿ ತಲ್ಲಣ ಉಂಟಾಗಿದೆ. ಬುಧವಾರ (ಫೆಬ್ರವರಿ 14) ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ (Sensex) 700 ಪಾಯಿಂಟ್‌ಗಳ ಕುಸಿತ ಕಂಡರೆ, ನಿಫ್ಟಿಯು (Nifty) 200 ಅಂಕಗಳಷ್ಟು ಕುಸಿತ ಕಂಡಿತು. ಇದರಿಂದಾಗಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸುವಂತಾಯಿತು.

ಸುಮಾರು 700 ಪಾಯಿಂಟ್‌ ಕಳೆದುಕೊಂಡ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ 70,854 ಪಾಯಿಂಟ್‌ಗಳಿಗೆ ಕುಸಿಯಿತು. ಇನ್ನು ನಿಫ್ಟಿ ಕೂಡ 183 ಪಾಯಿಂಟ್‌ಗಳನ್ನು ಕಳೆದುಕೊಂಡು 21,543 ಅಂಕಗಳಿಗೆ ಕುಸಿಯಿತು. ಅಮೆರಿಕ ಹಣದುಬ್ಬರದ ಕುರಿತು ಜನವರಿ ತಿಂಗಳ ವರದಿ ಲಭ್ಯವಾಗಬೇಕಿದೆ. ಮೂಲಗಳ ಪ್ರಕಾರ, ಜನವರಿಯಲ್ಲಿ ಹಣದುಬ್ಬರವು ಶೇ.3.1ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಶೇ.2.9ರಷ್ಟು ಏರಿಕೆಯ ನಿರೀಕ್ಷೆಯಿತ್ತು. ಆದರೆ, ಈಗ ಜಾಸ್ತಿಯಾಗುತ್ತದೆ ಎಂದು ವರದಿಗಳು ತಿಳಿಸಿದ ಕಾರಣ ಹೂಡಿಕೆದಾರರಲ್ಲಿ ತಳಮಳ ಉಂಟಾಗಿದೆ. ಇದರ ಪರಿಣಾಮ ಭಾರತದ ಮೇಲೂ ಬೀರುತ್ತಿದೆ.

ಹಣದುಬ್ಬರ ಏರಿಕೆ ಭೀತಿಯಿಂದಾಗಿ ಅಮೆರಿಕದ ವಾಲ್‌ಸ್ಟ್ರೀಟ್‌ ಷೇರುಗಳ ಮೌಲ್ಯವು ರಾತ್ರೋರಾತ್ರಿ ಕುಸಿತ ಕಂಡಿದೆ. ವರದಿ ವಿಳಂಬವಾಗಿರುವುದು ಕೂಡ ಹೂಡಿಕೆದಾರರಲ್ಲಿ ಆತಂಕ ಮೂಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಭಾರತದ ಹಲವು ಕಂಪನಿಗಳ ಷೇರುಗಳ ಮೌಲ್ಯವು ಜಾಸ್ತಿಯಾಗಿದೆ. ಅದಾನಿ ಗ್ರೀನ್‌ ಎನರ್ಜೀಸ್‌ ಶೇ.2ರಷ್ಟು ಏರಿಕೆ ಕಂಡಿದೆ. ಸನ್‌ ಟಿವಿ ನೆಟ್‌ವರ್ಕ್‌ ಲಿಮಿಟೆಡ್‌, ಮಹೀಂದ್ರಾ & ಮಹೀಂದ್ರಾ ಕಂಪನಿಗಳ ಷೇರುಗಳ ಮೌಲ್ಯವೂ ಏರಿಕೆಯಾಗಿದೆ. ಮುತೂಟ್‌ ಫೈನಾನ್ಸ್‌ ಲಿಮಿಟೆಡ್‌ ಷೇರುಗಳ ಮೌಲ್ಯ ಕುಸಿದಿದೆ.

ಇದನ್ನೂ ಓದಿ: Share Market : ಚೀನಾವನ್ನು ಹಿಂದಿಕ್ಕಿ ನಾಗಾಲೋಟದಲ್ಲಿರುವ ಭಾರತದ ಷೇರು ಮಾರುಕಟ್ಟೆ​; ಇಲ್ಲಿದೆ ಅಂಕಿ ಅಂಶ

7 ಲಕ್ಷ ಕೋಟಿ ರೂ. ನಷ್ಟ

ಕಳೆದ ಸೋಮವಾರವೂ (ಫೆಬ್ರವರಿ 12) ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’ ಉಂಟಾಗಿ ಹೂಡಿಕೆದಾರರಿಗೆ ಭಾರಿ ನಷ್ಟವಾಗಿತ್ತು. ಹೂಡಿಕೆದಾರರಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇ.ಕುಸಿದು 71,072.49 ಕ್ಕೆ ಕೊನೆಗೊಂಡಿತ್ತು. ಅಮೆರಿಕವು ಬಡ್ಡಿದರ ಕಡಿತದ ಬಗ್ಗೆ ಸಮಯದ ನಿರೀಕ್ಷೆಯ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಪ್ರತಿಕೂಲ ಪರಿಣಾಮ ಬೀರಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version