ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 300 ಅಂಕ ಚೇತರಿಸಿತು. ನಿಫ್ಟಿ 91 ಅಂಕ ಏರಿತು. ಸೆನ್ಸೆಕ್ಸ್ 59,141 ಅಂಕ (Sensex) ಹಾಗೂ ನಿಫ್ಟಿ 17,622ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಶುಕ್ರವಾರದ ಭಾರಿ ಇಳಿಕೆಯ ನಂತರ ಇಂದು ಬೆಳಿಗ್ಗೆ ಅಲ್ಪ ಪ್ರಮಾಣದ ಏರಿಕೆಯೊಂದಿಗೆ ಷೇರುಪೇಟೆ ಪ್ರಾರಂಭವಾದರೂ ತಕ್ಷಣ ಕುಸಿತವಾಯಿತು. ನಂತರ ಅಷ್ಟೇ ವೇಗವಾಗಿ ಪುಟಿದೆದ್ದಿತು. ದಿನ ಪೂರ್ತಿ ಏರಿಳಿಕೆಯೊಂದಿಗೆ ವಹಿವಾಟು ನಡೆಸಿ ದಿನದ ಅಂತ್ಯಕ್ಕೆ ಸೂಚಂಕ್ಯ ಏರಿಕೆಯೊಂದಿಗೆ ಮುಕ್ತಾಯವಾಯಿತು.
“ಬಹುದೊಡ್ಡ ಘಟನೆಯ ಮೊದಲು ಸಮುದ್ರ ಶಾಂತವಾಗಿರುತ್ತದೆ ಎಂಬಂತೆ ಇಂದು ಷೇರು ಮಾರುಕಟ್ಟೆ ಕಂಡುಬಂದಿತು. ಬುಧವಾರ ಅಮೇರಿಕಾದ ಫೆಡರಲ್ ಬ್ಯಾಂಕ್ ಎಷ್ಟು ಬಡ್ಡಿದರ ಏರಿಸುತ್ತದೆ ಎಂಬುದನ್ನು ಜಗತ್ತು ಕುತೂಹಲದಿಂದ ಕಾಯುತ್ತಿದೆ. ಬಡ್ಡಿದರ ಘೋಷಣೆಯ ನಂತರ ಷೇರುಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬರುವ ಸೂಚನೆಗಳಿವೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಸಹ ಗುರುವಾರ ಬಡ್ಡಿದರ ಏರಿಸುವ ಸಾಧ್ಯತೆಗಳಿವೆ.
ಇಂದು ಸಾರ್ವಜನಿಕ ಬ್ಯಾಂಕಿಂಗ್ ವಲಯ, ಮಾಧ್ಯಮ, ಎಫ್ಎಂಸಿಜಿ ಮತ್ತು ವಾಹನೋಧ್ಯಮ ಷೇರುಗಳು ಏರಿಕೆ ಕಂಡರೆ, ರಿಯಾಲಿಟಿ, ಇಂಧನ ಮತ್ತು ಲೋಹದ ಷೇರುಗಳು ಇಳಿಕೆ ದಾಖಲಿಸಿದವು.
ಅದಾನಿ ಸಮೂಹದ ಕಂಪನಿಯಾಗಿರುವ ಅಂಬುಜಾ ಸಿಮೆಂಟ್ ಷೇರು ದರ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದೆ. ಸೋಮ ವಾರ 8.5% ಏರಿಕೆ ದಾಖಲಿಸಿತು. (568 ರೂ.)
ಆರ್ಥಿಕ ಹಿಂಜರಿತದ ಭೀತಿ: ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರಿ ಹಣದುಬ್ಬರ ಸಮಸ್ಯೆ ಎದುರಿಸುತ್ತಿದ್ದು, ನಿಯಂತ್ರಣಕ್ಕಾಗಿ ಬಡ್ಡಿದರ ಹೆಚ್ಚಿಸುವ ಹಾದಿಗೆ ಕೇಂದ್ರ ಬ್ಯಾಂಕಗಳು ಮುಂದಾಗುತ್ತಿವೆ. ಅಮೇರಿಕಾ, ಆಸ್ಟ್ರೇಲಿಯಾ, ಜಪಾನ, ಜರ್ಮನಿ, ಬ್ರಿಟನ್ ಸೇರಿದಂತೆ ಅನೇಕ ದೇಶಗಳು ಬಹು ದಶಕಗಳ ನಂತರ ಭಾರಿ ಹಣದುಬ್ಬರದ ಪರಿಸ್ಥಿತಿಗೆ ಸಿಲುಕಿವೆ. ಇದರಿಂದ ಪಾರಾಗಲು ದೇಶದಲ್ಲಿ ಹಣದ ಚಲಾವಣೆ ಕಡಿಮೆ ಮಾಡುವ ಒಂದೇ ದಾರಿಯನ್ನು ಅನುಸರಿಸುತ್ತಿರುವುದರಂದ ಕೈಗಾರಿಕಾ ಉತ್ಪಾದನೆ ಭಾರಿ ಇಳಿಕೆ ಕಾಣುವ ಸಾಧ್ಯತೆ ನಿಶ್ಚಳವಾಗಿದೆ. ಇದರಿಂದ 2023 ಕ್ಕೆ ಜಗತ್ತು ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ ಎಂದು ವಿಶ್ವ ಬ್ಯಾಂಕ್ ವರದಿ ನೀಡಿದೆ.