ಮುಂಬಯಿ: ಸತತ ಎಂಟು ದಿನಗಳ ವಹಿವಾಟಿನಲ್ಲಿ ಕುಸಿತ ಕಂಡ ಬಳಿಕ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಬುಧವಾರ 448 ಅಂಕಗಳ ಚೇತರಿಕೆ ದಾಖಲಿಸಿತು. ದಿನದ ಅಂತ್ಯಕ್ಕ 59,411ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 146 ಅಂಕ ಚೇತರಿಸಿ 17,450ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಸೂಚ್ಯಂಕ ಚೇತರಿಸಿದ್ದರೂ, ಒಟ್ಟಾರೆ ಪರಿಸ್ಥಿತಿಯ ಮುನ್ನೋಟ ನಕಾರಾತ್ಮಕವಾಗಿದೆ ಎಂದು ಸ್ಯಾಮ್ಕೊ ಸೆಕ್ಯುರಿಟಸ್‌ನ ತಂತ್ರಜ್ಞ ರೋಹನ್ ಪಾಟೀಲ್ ತಿಳಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 7 ಪೈಸೆ ಏರಿದ್ದು, 82.51 ರೂ..ನಷ್ಟಿತ್ತು.
ಅದಾನಿ ಸಮೂಹದ ಷೇರು ದರ ಚೇತರಿಸಿದ್ದೇಕೆ? ಅದಾನಿ ಎಂಟರ್‌ಪ್ರೈಸಸ್ ಷೇರು ದರ ಬುಧವಾರ 16% ಏರಿಕೆ ದಾಖಲಿಸಿತ್ತು, ಷೇರು ದರ 1,579 ರೂ.ಗೆ ಚೇತರಿಸಿತ್ತು. ಕಳೆದ ಎರಡು ದಿನಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ (Adani Enterprises) ಷೇರು ದರ 31.2% ಏರಿಕೆ ದಾಖಲಿಸಿದೆ. ಷೇರು ದರ 1,579ರೂ.ಗೆ ಚೇತರಿಸಿತು. ಅದಾನಿ ಎಂಟರ್‌ಪ್ರೈಸಸ್ ಷೇರು ದರ ಮಂಗಳವಾರ 14% ಏರಿಕೆ ದಾಖಲಿಸಿತ್ತು. ಅದಾನಿ ಎಂಟರ್ ಪ್ರೈಸಸ್ ಇತ್ತೀಚೆಗೆ ತನ್ನ 20,000 ಕೋಟಿ ರೂ. ಮೌಲ್ಯದ ಎಫ್‌ಪಿಒ ಅನ್ನು ಹಿಂತೆಗೆದುಕೊಂಡಿತ್ತು.
ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 7.50 ಲಕ್ಷ ಕೋಟಿ ರೂ. ಮೀರಿದೆ. ಮಂಗಳವಾರ ಷೇರು ದರ ಚೇತರಿಸಿತ್ತು. ಬುಧವಾರ ಇದು ಮುಂದುವರಿದಿದೆ. ಅದಾನಿ ಗ್ರೂಪ್ ಸಿಂಗಾಪುರದಲ್ಲಿ ಮತ್ತು ಹಾಂಕಾಂಗ್‌ನಲ್ಲಿ ನಡೆಸಿದ ಫಿಕ್ಸೆಡ್ ಇನ್‌ಕಮ್ ರೋಡ್ ಶೋ ಹೂಡಿಕೆದಾರರ ವಿಶ್ವಾಸ ಗಳಿಸಿದೆ. ಇದು ಷೇರುಗಳ ದರ ಚೇತರಿಕೆಗೆ ಕಾರಣವಾಗಿದೆ. ಅದಾನಿ ಸಮೂಹ 6,560 ಕೋಟಿ ರೂ. ಸಾಲ ಪಡೆಯಲು ಒಪ್ಪಂದವನ್ನು ಅಂತಿಮಗೊಳಿಸಿದೆ. ಇದು ಸಕಾರಾತ್ಮಕ ಪ್ರಭಾವ ಬೀರಿದೆ.