ಮುಂಬಯಿ: ಅಮೆರಿಕ ಮಾರುಕಟ್ಟೆಯ ಪ್ರಭಾವ ಇಂದೂ ಸಹ ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ ಪರಿಣಾಮ ಷೇರುಪೇಟೆ ತಟಸ್ಥ ಸ್ಥಿತಿಯಲ್ಲಿ ಮುಕ್ತಾಯ ಕಂಡಿತು. ಬೆಳಿಗ್ಗೆ ನಿಫ್ಟಿ 81 ಅಂಕಗಳ ಏರಿಕೆಯೊಂದಿಗೆ 17568 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 236 ಅಂಶಗಳ (Sensex) ಹೆಚ್ಚಳದೊಂದಿಗೆ 59196 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಟಿ 237 ಅಂಕಗಳ ಏರಿಕೆಯೊಂದಿಗೆ 40556 ಅಂಕಗಳೊಂದಿಗೆ ವಹಿವಾಟು ಪ್ರಾರಂಭವಾಯಿತು.
ನಿಫ್ಟಿ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು 17600 ರ ಗಡಿ ದಾಟಿ ವಹಿವಾಟು ನಡೆಸಿತು. ನಂತರ ಪ್ರಮುಖ ರೆಜಿಸ್ಟೇನ್ಸ್ ಆದ 17600ರಲ್ಲಿ ಹೂಡಿಕೆದಾರರು ಲಾಭಾಂಶ ಪಡೆದುಕೊಳ್ಳಲು ಮುಂದಾಗಿದ್ದರಿಂದ ಮಾರುಕಟ್ಟೆ ಕುಸಿತ ಕಂಡಿತು. ಒಂದು ಹಂತದಲ್ಲಿ ಅಲ್ಪ ಸಮಯ ನಕಾರಾತ್ಮಕವಾಗಿ ವಹಿವಾಟು ನಡೆಸಿ 17480 ರ ಬಳಿ ಸರ್ಪೋಟ್ ಪಡೆದು ದಿನದ ಅಂತ್ಯಕ್ಕೆ 25 ಅಂಕಗಳ ಅಲ್ಪ ಚೇತರಿಕೆಯೊಂದಿಗೆ 17512 ಕ್ಕೆ ಮುಕ್ತಾಯಕಂಡಿತು. ಬ್ಯಾಂಕ್ ನಿಫ್ಟಿ ಸಹ ದಿನದ ಪ್ರಾರಂಭದಿಂದಲೂ ಲಾಭಾಂಶ ಒತ್ತಡಕ್ಕೆ ಒಳಗಾಗಿ ಕುಸಿತ ದಾಖಲಿಸುತ್ತಾ ಸಾಗಿತು. ದಿನದ ಅಂತ್ಯಕ್ಕೆ 54 ಅಂಶಗಳ ಹೆಚ್ಚಳದೊಂದಿಗೆ 40373 ಅಂಕಗಳಿಗೆ ವಹಿವಾಟು ಅಂತ್ಯಗೊಂಡಿತು. ಸೆನ್ಸೆಕ್ಸ್ ಸಹ 146 ಅಂಕಗಳ ಏರಿಕೆಯೊಂದಿಗೆ 59107 ರಲ್ಲಿ ಪರಿಸಮಾಪ್ತಿಯಾಯಿತು.
ಸಣ್ಣ ಕಂಪನಿಗಳ ಸೂಚ್ಯಂಕ ಅಲ್ಪ ಏರಿಕೆಯನ್ನು ಕಂಡರೆ ಮಧ್ಯಮ ಕಂಪನಿಗಳ ಸೂಚ್ಯಂಕ ತಟಸ್ಥ ಸ್ಥಿತಿಯಲ್ಲಿ ಮುಕ್ತಾಯವಾಯಿತು. ತೈಲ ಮತ್ತು ಗ್ಯಾಸ್, ಎಫ್ಎಂಸಿಜಿ ಮತ್ತು ರಿಯಾಲಿಟಿ ವಲಯದ ಷೇರುಗಳು ಏರಿಕೆ ಕಂಡರೆ ಐಟಿ, ಲೋಹ ಮತ್ತು ಸಾರ್ವಜನಿಕ ವಲಯದ ಬ್ಯಾಂಕಗಳು ಇಳಿಕೆ ದಾಖಲಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 543 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 908 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ರೂಪಾಯಿ ಸಾರ್ವಕಾಲಿಕ ಕುಸಿತ:
ಭಾರತದ ರೂಪಾಯಿ ಅಮೇರಿಕಾದ ಡಾಲರ್ ಎದುರು ಇಂದು ಪುನಃ ಸಾರ್ವಕಾಲಿಕ ಕುಸಿತ ದಾಖಲಿಸಿತು. ರೂಪಾಯಿ ಒಂದು ಡಾಲರ್ ಎದುರು 83 ರೂ ಗೆ ವಹಿವಾಟು ನಡೆಸಿತು. ಇದು ಭಾರತದ ಆಮದು ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಷೇರು ಮಾರುಕಟ್ಟೆಗೆ ನಕಾರಾತ್ಮಕ ಅಂಶವಾಗಿ ಪರಿಗಣಿತವಾಗುತ್ತದೆ.
ತ್ರೈಮಾಸಿಕ ಫಲಿತಾಂಶ: ಮಾಧ್ಯಮ ವಲಯದ ಪ್ರಮುಖ ಕಂಪನಿಯಾದ ನೆಟ್‌ವರ್ಕ್ 18 ನ ತ್ರೈಮಾಸಿಕ ಫಲಿತಾಂಶ ನಿರೀಕ್ಷೆಗಿಂತ ಕಡಿಮೆ ಬಂದಿದ್ದರಿಂದ ಇಂದು ಕಂಪನಿಯ ಷೇರು ಶೇ. 6.2 ರಷ್ಟು ನಷ್ಟವನ್ನು ಅನುಭವಿಸಿತು.
ನಾಳೆ ಬಹಳಷ್ಟು ಪ್ರಮುಖ ಕಂಪನಿಗಳು 2 ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಬ್ಯಾಂಕಿಂಗ್ ವಲಯದಲ್ಲಿ ಆಕ್ಸಸ್ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಯುನಿಯನ್ ಬ್ಯಾಂಕ್ , ಐಟಿ ವಲಯದ ಎಂಫಸಿಸ್, ಕೂಪೋರ್ಜ್, ಹ್ಯಾಪಿಯೆಸ್ಟ್ ಮೈಂಡ್. ಎನ್ಬಿಎಫ್ಸಿ ವಲಯದ ಬಜಾಜ್ ಫೈನಾನ್ಸ್, ಎಲ್ ಎಂಡ್ ಟಿ ಫೈನಾನ್ಸ್ ಕಂಪನಿಗಳು, ಎಫ್ ಎಂಸಿಜಿ ವಲಯದ ದಿಗ್ಗಜರಾದ ಏಷಿಯನ್ ಪೈಂಟ್, ಕೊಲಗೇಟ್, ಐಟಿಸಿ ಮತ್ತು ಟಾಟಾ ಕನ್ಸೂಮರ್ ಪ್ರಾಡೆಕ್ಟ್ಸ್ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಅದೇ ರೀತಿ ಇತರೆ ಪ್ರಮುಖ ಕಂಪನಿಗಳಾದ ಡಿಕ್ಸನ್ ಟೆಕ್ನಾಲಜಿ, ಐಸಿಐಸಿಐ ಸೆಕ್ಯೂರಿಟಿ, ಇಂಡಿಯಾ ಮಾರ್ಟ್, ಐಇಎಕ್ಸ್, ಯುಟಿಐ ಎಎಂಸಿ, ಯುನೈಟೆಡ್ ಬ್ರೂವರೀಸ್ ಮತ್ತು ಜೀ ಮೀಡಿಯಾ ವರದಿಗಳು ಹೊರಬರಲಿವೆ.
ಭಾರತದ ಷೇರುಪೇಟೆಯಲ್ಲಿ ಕಂಪನಿಗಳ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಣೆ ಪ್ರಾರಂಭವಾದಂತೆ ಅಮೇರಿಕಾದಲ್ಲಿ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಣೆ ಆರಂಭವಾಗಿದೆ. ಅಮೇರಿಕಾದ ನೆಟಫ್ಲಿಕ್ಸ್ ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದೆ. ಅದೇ ರೀತಿ ಇಂದು ರಾತ್ರಿ ಟೆಸ್ಲಾ ಮತ್ತು ಐಬಿಎಂ ಕಂಪನಿಗಳು ಫಲಿತಾಂಶ ಪ್ರಕಟಿಸಲಿವೆ. ಮುಂದಿನ ವಾರ ಪ್ರಮುಖ ಕಂಪನಿಗಳಾದ ಗೂಗಲ್, ಅಮೇಜಾನ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳ ಫಲಿತಾಂಶ ಅಮೇರಿಕಾ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿವೆ. ಇದು ಜಗತ್ತಿನ ಇತರೆ ಮಾರುಕಟ್ಟೆಯ ಮೇಲೆ ಪರೋಕ್ಷ ಪರಿಣಾಮ ಬೀರುವುದರಿಂದ ಅಮೇರಿಕಾ ಕಂಪನಿಗಳ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.