ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 248 ಜಿಗಿದು 61,872ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. (Sensex New Record) ಇದು ಮುಕ್ತಾಯದ ಅಂಕಗಳ ಮಟ್ಟದ ಹೋಲಿಕೆಯಲ್ಲಿ ಗರಿಷ್ಠ ಮಟ್ಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಏರಿಕೆ ದಾಖಲಿಸಿತು. ಅಮೆರಿಕ-ಚೀನಾ ಅಧ್ಯಕ್ಷರು ಜಿ20 ಶೃಂಗದಲ್ಲಿ ಭೇಟಿಯಾದ ಬಳಿಕ, ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಉಪಶಮನವಾಗುವ ಭರವಸೆ ಮೂಡಿದೆ. ಭದ್ರತೆ, ವ್ಯಾಪಾರ, ತಂತ್ರಜ್ಞಾನ, ಮಾನವ ಹಕ್ಕುಗಳ ವಿಚಾರದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಉಂಟಾಗಿತ್ತು.
ಸೆನ್ಸೆಕ್ಸ್ 61,872ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 18,403ಕ್ಕೆ ಸ್ಥಿರವಾಯಿತು. ಹಣದುಬ್ಬರ ಮತ್ತಷ್ಟು ಇಳಿಕೆಯಾದರೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತಷ್ಟು ಚೇತರಿಸುವ ನಿರೀಕ್ಷೆ ಇದೆ.
ಬ್ಯಾಂಕ್ ನಿಫ್ಟಿ ದಾಖಲೆ:
ಬ್ಯಾಂಕ್ ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿದ್ದರ ಪರಿಣಾಮ ಇಂದು ಷೇರುಪೇಟೆ ಸಕಾರಾತ್ಮಕವಾಗಿ ವಹಿವಾಟು ಪೂರ್ಣಗೊಳಿಸಿತು. ಇದು ನಿಫ್ಟಿ ಮತ್ತು ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆ ದಾಖಲಿಸಲು ನೆರವಾಗಲಿದೆ ಎಂದು ಮಾರುಕಟ್ಟೆ ನಿರೀಕ್ಷಿಸುತ್ತಿದೆ.
ನಿಫ್ಟಿ ಇಂದು 33 ಅಂಕಗಳ ಏರಿಕೆಯೊಂದಿಗೆ 18362 ಕ್ಕೆ ಮತ್ತು ಸೆನ್ಸೆಕ್ಸ್ ಕೇವಲ 6 ಅಂಶಗಳ ಹೆಚ್ಚಳದೊಂದಿಗೆ ಮಾರುಕಟ್ಟೆ ಪ್ರಾರಂಭವಾಯಿತು. ಬ್ಯಾಂಕ್ ನಿಫ್ಟಿ 158 ಅಂಕಗಳ ಏರಿಕೆಯೊಂದಿಗೆ 42234 ಕ್ಕೆ ಆರಂಭವಾಯಿತು.
ಮಾರುಕಟ್ಟೆ ಆರಂಭವಾದ ಕೂಡಲೇ ಅಲ್ಪಾವಧಿ ಹೂಡಿಕೆದಾರರು ಲಾಭಾಂಶ ತೆಗೆದುಕೊಳ್ಳಲು ಮುಂದಾಗಿದ್ದರಿಂದ ಷೇರುಪೇಟೆ ಕುಸಿತವಾಯಿತು. ನಿಫ್ಟಿ 18280 ಕ್ಕೆ ಹಲವು ಸಲ ಸರ್ಪೋಟ್ ತೆಗೆದುಕೊಂಡು ಮಧ್ಯಾಹ್ನ 2.30 ರ ನಂತರ 140 ಅಂಶಗಳ ಭಾರಿ ಏರಿಕೆಯಾಯಿತು. ಬ್ಯಾಂಕ್ ನಿಫ್ಟಿ ಸಹ ಆರಂಭದಿಂದ ಕುಸಿತ ಕಂಡರೂ ಮಧ್ಯಾಹ್ನದವರೆಗೆ ಏರಿಳಿತವಾಯಿತು. ನಂತರ ಪುಟಿದೆದ್ದು 42450 ರ ಸಾರ್ವಕಾಲಿಕ ಏರಿಕೆಯ ವಹಿವಾಟು ದಾಖಲಿಸಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.26 ರಷ್ಟು ಏರಿಕೆಯಾದರೆ ಮಧ್ಯಮ ಕಂಪನಿಗಳ ಸೂಚ್ಯಂಕ 0.04 ರಷ್ಟು ಇಳಿಕೆಯಾಯಿತು.
ಆಟೋ, ಲೋಹ ಕಂಪನಿಗಳ ಸೂಚ್ಯಂಕ ಏರಿಕೆಯಾದರೆ, ಮಾಧ್ಯಮ ಮತ್ತು ರಿಯಾಲಿಟಿ ಸೂಚ್ಯಂಕಗಳು ಇಳಿಕೆಯಾದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 221 ಕೋಟಿ ರೂ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು 549 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.