Site icon Vistara News

Bulls Return: ಗೂಳಿಯ ಅಬ್ಬರಕ್ಕೆ ಶುಭ ಶುಕ್ರವಾರ, ಸೆನ್ಸೆಕ್ಸ್‌ 1,500 ಅಂಕ ಜಿಗಿತ

bse

ಮುಂಬಯಿ: ಕಳೆದ ಎರಡು ದಿನಗಳಿಂದ ತೀವ್ರ ಮಂದಗತಿಯಲ್ಲಿದ್ದ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಗೂಳಿಯ ಅಬ್ಬರಕ್ಕೆ ಸೂಚ್ಯಂಕ ಸೆನ್ಸೆಕ್ಸ್‌ 1,534 ಅಂಕ ಜಿಗಿಯಿತು.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 54,326 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 456 ಅಂಕ ಚೇತರಿಸಿ 16,266ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ರಿಲಯನ್ಸ್‌ ಷೇರುಗಳ ದರದಲ್ಲಿ ಶೇ.6ರಷ್ಟು ಏರಿಕೆ ದಾಖಲಾಯಿತು. ಕಳೆದ 18 ತಿಂಗಳುಗಳಲ್ಲೇ ಗರಿಷ್ಠ ಎತ್ತರಕ್ಕೆ ಜಿಗಿಯಿತು. ( 2,632 ರೂ.)

ವಾಲ್‌ ಸ್ಟ್ರೀಟ್‌ನಲ್ಲಿ ಸಂಭವಿಸಿದ್ದ ಕುಸಿತವನ್ನೂ ಲೆಕ್ಕಿಸದೆ ಸೆನ್ಸೆಕ್ಸ್‌ ಜಿಗಿಯಿತು. ಇದರ ಪರಿಣಾಮ ಈ ವಾರದಲ್ಲಿ ಉಂಟಾಗಿದ್ದ ನಷ್ಟವನ್ನು ಸೂಚ್ಯಂಕ ಸರಿದೂಗಿಸಿದೆ. ಸೆನ್ಸೆಕ್ಸ್‌ ಗುರುವಾರ 1,416 ಅಂಕ ಕುಸಿದಿತ್ತು.
ಕಳೆದ ಕೆಲ ವಾರಗಳಿಂದ ನಿರಂತರ ಕುಸಿತ ಕಂಡು ಕಂಗಾಲಾಗಿದ್ದ ಷೇರುದಾರರು ಮತ್ತು ದಲ್ಲಾಳಿಗಳು ಶುಕ್ರವಾರ ಉಲ್ಲಸಿತರಾಗಿದ್ದಾರೆ. ಹೀಗಿದ್ದರೂ, ಆರ್ಥಿಕ ಹಿಂಜರಿತದ ಭೀತಿ, ವಿಶ್ವಾದ್ಯಂತ ಬಡ್ಡಿ ದರ ಹೆಚ್ಚಳದ ಪರಿಣಾಮ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.

ಬಿಎಸ್‌ಇನಲ್ಲಿ ಲೋಹ, ರಿಯಾಲ್ಟಿ, ಔಷಧ, ಬಂಡವಾಳ ಸರಕು, ಪಿಎಸ್‌ಯು ಷೇರುಗಳು ಶೇ.3-4 ಲಾಭ ಗಳಿಸಿತು.
ಡಾರೆಡ್ಡೀಸ್‌ ಷೇರು ಶೇ.8.13 ಲಾಭ ದಾಖಲಿಸಿತು. ಸೂಚ್ಯಂಕಗಳ ಚೇತರಿಕೆಯಿಂದ ಬಿಎಸ್‌ಇ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 5.05 ಲಕ್ಷ ಕೋಟಿ ರೂ. ಏರಿಕೆಯಾಗಿದ್ದು, 254 ಲಕ್ಷ ಕೋಟಿ ರೂ.ಗೆ ಏರಿತು.

ಇದನ್ನೂ ಓದಿ: ಸತತ ಕುಸಿತದ ಬಳಿಕ ಶುಕ್ರವಾರ ಆರಂಭದಲ್ಲೇ ಸೆನ್ಸೆಕ್ಸ್‌ 1100 ಅಂಕ ಏರಿಕೆ

Exit mobile version