Site icon Vistara News

Sensex | 60,000 ಅಂಕಗಳಿಗೆ ಮರಳಿದ ಸೆನ್ಸೆಕ್ಸ್‌, ನಿಫ್ಟಿ 18,000ಕ್ಕೆ ಏರಿಕೆ

stock invest

ಮುಂಬಯಿ: ಜಾಗತಿಕ ಷೇರು ಸೂಚ್ಯಂಕಗಳಲ್ಲಿ ಭಾರಿ ಏರಿಕೆಯ ಪರಿಣಾಮ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಮಹತ್ವದ 18000 ಗಡಿ ಮತ್ತು ಸೆನ್ಸೆಕ್ಸ್ 60,000ದ (Sensex) ಗಡಿಯನ್ನು ಸೋಮವಾರ ದಾಟಿತು. ಶುಕ್ರವಾರ ರಾತ್ರಿ ಅಮೇರಿಕದ ಷೇರುಪೇಟೆಯು ಭಾರಿ ಏರಿಕೆ ದಾಖಲಿಸಿದ್ದರಿಂದ ಇಂದು ಏಷ್ಯಾದ ಮಾರುಕಟ್ಟೆಗಳು ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಭಾರಿ ಹೆಚ್ಚಳದೊಂದಿಗೆ ಆರಂಭಗೊಂಡವು.
ನಿಫ್ಟಿ ಇಂದು 123 ಅಂಕಗಳ ಏರಿಕೆಯೊಂದಿಗೆ 17910 ರಲ್ಲಿ ಪ್ರಾರಂಭಗೊಂಡರೆ, ಸೆನ್ಸೆಕ್ಸ್ 247 ಅಂಶಗಳ ಹೆಚ್ಚಳದೊಂದಿಗೆ ಮಹತ್ವದ 60 ಸಾವಿರ ಗಡಿ ದಾಟಿ 60246 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಫಿ ಸಹ 274 ಅಂಕಗಳ ಏರಿಕೆಯೊಂದಿಗೆ 41265 ಅಂಕಗಳಿಗೆ ವಹಿವಾಟು ಶುರುವಾಯಿತು.
ದಿನದ ಕೊನೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾದ ಕಾರಣ ನಿಫ್ಟಿ 17940 ರ ರೆಜಿಸ್ಟೇಸ್ ದಾಟಿ ಏರುಮುಖದಲ್ಲಿ 18 ಸಾವಿರದ ಗಡಿ ದಾಟಿತು. ದಿನದ ಅಂತ್ಯಕ್ಕೆ ನಿಫ್ಟಿ 225 ಅಂಕಗಳ ಏರಿಕೆಯೊಂದಿಗೆ 18012 ರಲ್ಲಿ ಮತ್ತು ಸೆನ್ಸೆಕ್ಸ್ 786 ಅಂಕಗಳ ಹೆಚ್ಚಳದೊಂದಿಗೆ 60746 ರಲ್ಲಿ ಮುಕ್ತಾಯವಾಯಿತು. ನಿಫ್ಟಿಯ ನಾಗಾಲೋಟಕ್ಕೆ ಬ್ಯಾಂಕ್ ನಿಫ್ಟಿ ಅಂತಹ ಮಹತ್ವದ ಕೊಡುಗೆ ನೀಡದಿದ್ದರೂ 317 ಅಂಶಗಳ ಏರಿಕೆಯೊಂದಿಗೆ 41307 ರಲ್ಲಿ ಅಂತ್ಯಗೊಂಡಿತು. ಆದರೆ ಬ್ಯಾಂಕ್ ನಿಫ್ಟಿ ಸೂಚ್ಯಂಕದಲ್ಲಿ ಹೆಚ್ಚು ಮೌಲ್ಯ ಹೊಂದಿರುವ ಹೆಚ್ಡಿಎಫ್ಸಿ ಬ್ಯಾಂಕ್ ಇಷ್ಟು ದಿನ ಹೆಚ್ಚು ಏರಿಕೆ ಕಾಣದಿದ್ದರೂ ಇಂದು ಶೇ. 2.71 ರಷ್ಟು ಹೆಚ್ಚಳಗೊಂಡು 1500 ಸನಿಹಕ್ಕೆ ವಹಿವಾಟು ಅಂತ್ಯಗೊಳಿಸಿದೆ.
ಇಂದು ಪೇಟೆಯಲ್ಲಿ ಮಧ್ಯಮ ಕಂಪನಿಗಳು ಹೆಚ್ಚು ವಹಿವಾಟು ನಡೆಸಿದವು. ಇದರಿಂದ ಮಧ್ಯಮ ಕಂಪನಿಗಳ ಸೂಚ್ಯಂಕ ಶೇ.1.27 ರಷ್ಟು ಏರಿಕೆ ಕಂಡರೆ ಸಣ್ಣ ಕಂಪನಿಗಳ ಸೂಚ್ಯಂಕ ಕೇವಲ ಶೇ.0.13 ರಷ್ಟು ಹೆಚ್ಚಳವಾಯಿತು. ಆಟೋ, ಐಟಿ, ಫಾರ್ಮಾ ಮತ್ತು ಮೂಲಭೂತ ಸೌಕರ್ಯದ ಸೂಚ್ಯಂಕಗಳು ಸೇರಿದಂತೆ ಎಲ್ಲ ಸೂಚ್ಯಂಕಗಳು ಏರಿಕೆ ದಾಖಲಿಸಿದವು.
ಸಿಮೆಂಟ್ ವಲಯದ ಎಲ್ಲ ಷೇರುಗಳು ಏರಿಕೆ ಕಂಡವು. ಎರಡನೇ ತ್ರೈಮಾಸಿಕ ಫಲಿತಾಂಶದಲ್ಲಿ ನಿರೀಕ್ಷಿತ ವರದಿ ನೀಡದ ಬಂಧನ ಬ್ಯಾಂಕ್ ಶೇ. 10ರಷ್ಟು ಇಳಿಕೆಯಾಯಿತು. ಇದು ಬ್ಯಾಂಕ್ ನಿಫ್ಟಿ ಹೆಚ್ಚಳಕ್ಕೆ ತಡೆಯೊಡ್ಡಿತು.
ಇಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 4178 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 1107 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.

Exit mobile version