Site icon Vistara News

Stock Market: ಫಲಿತಾಂಶದ ಬಳಿಕ ಷೇರು ಪೇಟೆ ನೆಗೆತ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಲಾಭ

Stock Market

Sensex touches record high days after stock market crashed on counting day

ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶದ ದಿನ (ಜೂನ್‌ 4) (Lok Sabha Election Result 2024) ಷೇರು ಮಾರುಕಟ್ಟೆಯಲ್ಲಿ (Stock Market) ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ, ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾದ ಬೆನ್ನಲ್ಲೇ ಷೇರುಪೇಟೆಯು ಲಯಕ್ಕೆ ಮರಳಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಶುಕ್ರವಾರ ಶುಭ ಶುಕ್ರವಾರ ಆಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ಹಾಗೂ ಎನ್‌ಎಸ್‌ಇ ನಿಫ್ಟಿ ದಾಖಲೆಯ ಏರಿಕೆಯಿಂದಾಗಿ ಶುಕ್ರವಾರ ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಸುಮಾರು 21 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ತಿಳಿದುಬಂದಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,618 ಪಾಯಿಂಟ್‌ಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 76693 ಪಾಯಿಂಟ್ಸ್‌ಗೆ ಏರಿಕೆಯಾಯಿತು. ಇನ್ನು ಎನ್‌ಎಸ್‌ಇ ನಿಫ್ಟಿಯು 468 ಪಾಯಿಂಟ್‌ಗಳ ಏರಿಕೆಯೊಂದಿಗೆ ಕಳೆದ ಒಂದು ವರ್ಷದಲ್ಲಿಯೇ ದಾಖಲೆಯ 23,290 ಪಾಯಿಂಟ್‌ಗಳನ್ನು ತಲುಪಿತು. ಇದರಿಂದಾಗಿ, ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದರು ಎಂದು ತಿಳಿದುಬಂದಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಷೇರು ಮಾರುಕಟ್ಟೆಯು ಮತ್ತೆ ಲಯಕ್ಕೆ ಮರಳಿದಂತಾಗಿದೆ.

ಬಿಎಸ್‌ಇ ಸೆನ್ಸೆಕ್ಸ್‌ ಪಾಯಿಂಟ್‌ಗಳ ಏರಿಕೆಯಾದ ಕಾರಣ ಮಾರುಕಟ್ಟೆಯ ಬಂಡವಾಳವು 415 ಲಕ್ಷ ಕೋಟಿ ರೂಪಾಯಿಯಿಂದ 423 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಹೂಡಿಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುವುದು ಖಚಿತವಾದ ಕಾರಣ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಮುಂದುವರಿದಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಲಯದ ಭರವಸೆ ಇದೆ ಎನ್ನಲಾಗಿದೆ.

ನಿಫ್ಟಿ ಐಟಿಯ ಷೇರುಗಳ ಮೌಲ್ಯವು ಶೇ.3.5ರಷ್ಟು ಏರಿಕೆಯಾದ ಕಾರಣ ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಹಾಗೂ ಟಿಸಿಎಸ್‌ ಸೇರಿ ಹಲವು ಕಂಪನಿಗಳು ಉತ್ತಮ ಲಾಭ ಗಳಿಸಿವೆ. ಶೋಭಾ ಲಿಮಿಟೆಡ್‌, ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌, ಟಿವಿಎಸ್‌ ಮೋಟರ್‌ ಲಿಮಿಟೆಡ್‌, ರಿಲಯನ್ಸ್‌, ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌ ಸೇರಿ ಹಲವು ಕಂಪನಿಗಳು ಭಾರಿ ಪ್ರಮಾಣದಲ್ಲಿ ಲಾಭ ಗಳಿಸಿವೆ.

ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Exit mobile version