ಮುಂಬೈ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಕುಸಿತದ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ಶುಕ್ರವಾರದ ದಿನದ ವಹಿವಾಟು ಆರಂಭಗೊಂಡ ಕೆಲ ಹೊತ್ತಿನಲ್ಲೇ 1100 ಅಂಕ ಹೆಚ್ಚಳ ಕಂಡು 54,000ದ ಸನಿಹಕ್ಕೆ ತಲುಪಿದೆ. ನಿಫ್ಟಿ ಕೂಡ 350 ಅಂಕ ಏರಿಕೆ ಕಂಡು 16,170ರಲ್ಲಿ ವಹಿವಾಟು ಮುಂದುವರಿಸಿದೆ.
ಲೋಹ, ಆಟೊಮೊಬೈಲ್, ಪಿಎಸ್‌ಯು ಬ್ಯಾಂಕ್‌ಗಳ ಷೇರುಗಳು ನಿರೀಕ್ಷೆಗೂ ಮೀರಿ ಲಾಭ ಗಳಿಸಿತು. ಮುಖ್ಯವಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳ ಗಣನೀಯ ಚೇತರಿಕೆ ಸೆನ್ಸೆಕ್ಸ್ ಜಿಗಿತಕ್ಕೆ ಪುಷ್ಟಿ ನೀಡಿತು. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು. ಎಲ್‌ಐಸಿ ಷೇರು ದರ ಬೆಳಗ್ಗೆ ಶೇ.5.30 ಚೇತರಿಸಿದ್ದು, 846 ರೂ.ಗೆ ಏರಿತು.
ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವೇನು?
ಚೀನಾ ತನ್ನ ಆರ್ಥಿಕತೆಯ ಚೇತರಿಕೆಗೆ ಪ್ರಮುಖ ಬಡ್ಡಿ ದರವನ್ನು ಶೇ.4.46ರಿಂದ ಶೇ.4.45ಕ್ಕೆ ಕಡಿತಗೊಳಿಸಿದ್ದು, ಏಷ್ಯಾದಲ್ಲಿ ಷೇರು ಮಾರುಕಟ್ಟೆಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಇದರಿಂದ ಚೀನಾದಲ್ಲಿ ರಿಯಾಲ್ಟಿ ವಹಿವಾಟು ಚೇತರಿಸುವ ನಿರೀಕ್ಷೆ ಇದೆ. ಚೀನಾದ ಆರ್ಥಿಕತೆಗೂ ಏಷ್ಯಾದ ಆರ್ಥಿಕತೆಗೂ ಸಂಬಂಧ ಇರುವುದರಿಂದ ಷೇರು ಹೂಡಿಕೆದಾರರು ಉತ್ತೇಜಿತರಾದರು.
ಇದನ್ನೂ ಓದಿ: SHARE MARKET CRASH: ಸೆನ್ಸೆಕ್ಸ್ 1,158 ಅಂಕ ಪತನ, ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ. ನಷ್ಟ