ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ ಮಧ್ಯಾಹ್ನದ ವಹಿವಾಟಿನ ವೇಳೆಗೆ ೧,೧೧೨ ಅಂಕ ಜಿಗಿದಿದೆ. ಸೆನ್ಸೆಕ್ಸ್ ೫೨,೬೯೦ಕ್ಕೆ ಏರಿದ್ದರೆ, ನಿಫ್ಟಿ ೩೨೬ ಅಂಕ ಗಳಿಸಿ ೧೫,೬೮೦ಕ್ಕೆ ಜಿಗಿಯಿತು. ಮುಖ್ಯವಾಗಿ ಐಟಿ ಕಂಪನಿಗಳ ಷೇರುಗಳು ಜಿಗಿಯಿತು.
ಜಾಗತಿಕ ಮಾರುಕಟ್ಟೆಯಲ್ಲಿ ಷೇರು ಸೂಚ್ಯಂಕಗಳ ಚೇತರಿಕೆ, ತಂತ್ರಜ್ಞಾನ ಕಂಪನಿಗಳ ಷೇರುಗಳ ಖರೀದಿ ಭರಾಟೆ, ಅಮೆರಿಕದ ರಿಯಾಲ್ಟಿ ವಲಯದಲ್ಲಿ ವಹಿವಾಟು ಸುಧಾರಿಸಿರುವ ಕುರಿತ ಅಂಕಿ ಅಂಶಗಳು, ಸರಕುಗಳ ದರ ಇಳಿಕೆಯಾಗುತ್ತಿರುವುದು ಸಕಾರಾತ್ಮಕ ಪ್ರಭಾವ ಬೀರಿತು ಎಂದು ತಜ್ಞರು ತಿಳಿಸಿದ್ದಾರೆ.
ಬಿಎಸ್‌ಇನಲ್ಲಿ ಮಂಗಳವಾರ ಲೋಹ, ತಂತ್ರಜ್ಞಾನ, ಆಟೊಮೊಬೈಲ್ ಷೇರುಗಳು ಲಾಭ ಗಳಿಸಿತು. ಇತ್ತೀಚೆಗೆ ಕುಸಿತದ ಹಾದಿಯಲ್ಲಿದ್ದ ಐಟಿ ಷೇರುಗಳು ಲಾಭ ದಾಖಲಿಸಿತು. ಅಮೆರಿಕ ಮತ್ತು ಯುರೋಪಿನಲ್ಲಿ ಷೇರು ಸೂಚ್ಯಂಕಗಳು ಚೇತರಿಸಿತು.
ಸೆನ್ಸೆಕ್ಸ್ ಜಿಗಿತದ ಪರಿಣಾಮ ಬಿಎಸ್‌ಇ ಮಾರುಕಟ್ಟೆ ಬಂಡವಾಳ ಮೌಲ್ಯ ೨೩೪ ಲಕ್ಷ ಕೋಟಿ ರೂ.ಗಳಿಂದ ೨೩೯ ಲಕ್ಷ ಕೋಟಿ ರೂ.ಗೆ ಏರಿತು.