ನವದೆಹಲಿ: ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುವುದು ಸರಿಯಲ್ಲ ಎಂದಿರುವ ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಇದನ್ನು ಸ್ಥಗಿತಗೊಳಿಸಲು ಸರ್ಕಾರ ಶೀಘ್ರವೇ ಕಾನೂನು ನಿಯಮಾವಳಿಗಳನ್ನು ರಚಿಸಲಿದೆ ಎಂದು ತಿಳಿಸಿದ್ದಾರೆ.
ರೆಸ್ಟೊರೆಂಟ್ ಮತ್ತು ಹೋಟೆಲ್ ಮಾಲೀಕರುಗಳ ಸಂಘಟನೆಗಳೊಂದಿಗೆ ಮಾತುಕತೆಯನ್ನು ಗುರುವಾರ ನಡೆಸಿದ ಬಳಿಕ ಮಾತನಾಡಿದ ಅವರು, ರೆಸ್ಟೊರೆಂಟ್‌ಗಳು ಗ್ರಾಹಕರಿಂದ ಸೇವಾ ಶುಲ್ಕ ಪಡೆಯುತ್ತಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದರು.
ಇದರಿಂದಾಗಿ ಗ್ರಾಹಕರ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಸರಿಯಾದ ವ್ಯಾಪಾರ ನೀತಿಯೂ ಅಲ್ಲ. ಹೀಗಾಗಿ ಇದನ್ನು ಸ್ಥಗಿತಗೊಳಿಸಲು ಕಾನೂನು ಚೌಕಟ್ಟು ರಚಿಸಲಾಗುವುದು. ಏಕೆಂದರೆ 2017ರ ಮಾರ್ಗದರ್ಶಿಗಳ ಪಾಲನೆ ಆಗುತ್ತಿಲ್ಲ. ಮಾರ್ಗದರ್ಶಿಗಳಿಗೆ ಕಾನೂನು ಚೌಕಟ್ಟು ಇಲ್ಲದಿರುವುದರಿಂದ ಹೀಗಾಗಿದೆ ಎಂದರು. ಸಭೆಯಲ್ಲಿ ನ್ಯಾಶನಲ್ ರೆಸ್ಟೊರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ, ಫೆಡರೇಷನ್ ಆಫ್ ಹೋಟೆಲ್ ಆಂಡ್ ರೆಸ್ಟೊರೆಂಟ್ ಅಸೋಸಿಯೇಶನ್ ಮತ್ತು ಗ್ರಾಹಕ ಪರ ಸಂಘಟನೆಗಳು ಭಾಗವಹಿಸಿದ್ದವು.
ಸೇವಾ ಶುಲ್ಕ ವಸೂಲಾತಿ ತಡೆಗೆ ಕಾನೂನು ರಚಿಸಿದರೆ ಮಾತ್ರ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಗ್ರಾಹಕರು ಸೇವಾ ಶುಲ್ಕ ಮತ್ತು ಸೇವಾ ತೆರಿಗೆ ನಡುವೆ ಗೊಂದಲಕ್ಕೀಡಾಗುತ್ತಾರೆ ಎಂದು ಹೇಳಿದರು.
ಆದರೆ ಸೇವಾ ಶುಲ್ಕ ಸಂಗ್ರಹಿಸುವುದು ತಪ್ಪಲ್ಲ ಎಂದು ಎನ್‌ಆರ್‌ಎಐ ಮತ್ತು ಎಫ್‌ಎಚ್‌ಆರ್‌ಎಐ ವಾದಿಸಿತು. ಆದರೆ ಸರ್ಕಾರ ಈ ವಾದವನ್ನು ಸಮ್ಮತಿಸಲಿಲ್ಲ.