ಹೊಸದಿಲ್ಲಿ: ರೆಸ್ಟೊರೆಂಟ್ ಮತ್ತು ಹೋಟೆಲ್‌ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸುವುದಕ್ಕೆ ಸಂಬಂಧಿಸಿದ ವಿವಾದವನ್ನಿ ಇತ್ಯರ್ಥಪಡಿಸಲು ಹಾಗೂ ಸ್ಪಷ್ಟನೆಗಳನ್ನು ಉದ್ಯಮ ವಲಯದಿಂದ ಪಡೆಯಲು ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ 2ರಂದು ಸಭೆ ಕರೆದಿದೆ.
ಫೆಡರೇಷನ್ ಆಫ್ ಹೋಟೆಲ್ ಆಂಡ್ ರೆಸ್ಟೊರೆಂಟ್ ಅಸೋಸಿಯೇಶನ್ (FHRAI) ಜತೆ ಗ್ರಾಹಕ ವ್ಯವಹಾರ ಇಲಾಖೆಯ ಆಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಸೇವಾ ಶುಲ್ಕವನ್ನು ಸಾಮಾನ್ಯವಾಗಿ “ಟಿಪ್ಸ್ʼ ಎಂದು ಕರೆಯಲಾಗುತ್ತಿದ್ದು, ಇದನ್ನು ರೆಸ್ಟೊರೆಂಟ್ ತನ್ನ ಸಿಬ್ಬಂದಿಗೆ ನೀಡುತ್ತದೆ. ರೆಸ್ಟೊರೆಂಟ್‌ಗಳು ಸೇವಾ ಶುಲ್ಕವನ್ನು ಬಿಲ್ ನಲ್ಲೂ ಸೇರಿಸಬಹುದು. ಇದು ಬಿಲ್ ಮೊತ್ತದ ಶೇ.೫-೧೫ರಷ್ಟು ಇರುತ್ತದೆ. ಇದು ಸಾಮಾನ್ಯ ಪದ್ಧತಿಯಾಗಿದ್ದು, ಇತರ ದೇಶಗಳಲ್ಲೂ ಇದೆ ಎಂದು ಎಫ್‌ಎಚ್‌ಆರ್‌ಎಐ ವಾದಿಸಿದೆ.
ರೆಸ್ಟೊರೆಂಟ್‌ಗಳ “ಆಹ್ವಾನದʼ ಭಾಗವಾಗಿ ಸೇವಾ ಶುಲ್ಕ ಇರುತ್ತದೆ. ಇದು ಕಾನೂನುಬಾಹಿರ ಅಲ್ಲ ಎಂದು ಹೋಟೆಲ್ ಮತ್ತು ರೆಸ್ಟೊರೆಂಟ್ ಸಂಘಟನೆಗಳ ಒಕ್ಕೂಟ ತಿಳಿಸಿದೆ. ಸೇವಾ ಶುಲ್ಕ ನೀಡಬೇಕೆ ಬೇಡವೇ ಎಂಬುದನ್ನು ಗ್ರಾಹಕರು ನಿರ್ಧರಿಸಬೇಕು ಎಂದೂ ಒಕ್ಕೂಟ ತಿಳಿಸಿದೆ. ಆದರೆ ರೆಸ್ಟೊರೆಂಟ್‌ಗಳು ಏಕಪಕ್ಷೀಯವಾಗಿ ಬಿಲ್ ನಲ್ಲಿ ಸೇವಾ ಶುಲ್ಕವನ್ನು ಸೇರಿಸಿ ವಸೂಲು ಮಾಡುತ್ತವೆ ಎಂಬುದು ಗ್ರಾಹಕರ ದೂರು.
ಗ್ರಾಹಕರು ನೀಡುವ ಸೇವಾ ಶುಲ್ಕವನ್ನು ರಸ್ಟೊರೆಂಟ್‌ಗಳು ಸಿಬ್ಬಂದಿಗೆ ನೀಡುತ್ತವೆಯೇ ವಿನಾ, ತಾವೇ ಬಳಸುವುದಿಲ್ಲ. ಇದು ಕಾನೂನು ಪ್ರಕಾರ ತಪ್ಪೂ ಅಲ್ಲ ಎಂದು ಎಫ್‌ಎಚ್‌ಆರ್‌ಎಐನ ಉಪಾಧ್ಯಕ್ಷ ಗುರುಬಕ್ಷಿ ಸಿಂಗ್ ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಹಕರಿಂದ ಸೇವಾ ಶುಲ್ಕ ವಸೂಲು ಮಾಡದಂತೆ ರೆಸ್ಟೊರೆಂಟ್‌ಗಳಿಗೆ ಸರಕಾರದ ಎಚ್ಚರಿಕೆ