Site icon Vistara News

Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

Share Market

Share Market

ಮುಂಬೈ: ಬಾಂಬೆ ಷೇರು ಪೇಟೆ (Share Market)ಯಲ್ಲಿ ಗೂಳಿ ನೆಗೆತ ಮುಂದುವರಿದಿದೆ. ಬುಧವಾರ 78,053.52 ಅಂಕಗಳ ದಾಖಲೆಯ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್‌ (Sensex) ಇಂದು ಕೂಡ ಮೇಲ್ಮುಖವಾಗಿ ಸಾಗಿದೆ. ವಹಿವಾಟು ಆರಂಭದಲ್ಲಿ ಕುಸಿತ ದಾಖಲಿಸಿದ ನಂತರ ಸೆನ್ಸೆಕ್ಸ್‌ ಚೇತರಿಸಿಕೊಂಡಿದ್ದು, ಮೊದಲ ಬಾರಿಗೆ ಐತಿಹಾಸಿಕ 79,000 ಅಂಕ ಮುಟ್ಟಿದೆ. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ ಬೆಂಚ್ ಮಾರ್ಕ್ ಸೂಚ್ಯಂಕಗಳು ಜಿಗಿದುಕೊಂಡವು. ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 79,000 ಗಡಿಯನ್ನು ದಾಟಿತು ಮತ್ತು ನಿಫ್ಟಿ ಬ್ಲೂ-ಚಿಪ್ ಷೇರುಗಳ ಖರೀದಿಯ ಮಧ್ಯೆ ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಬ್ಲೂ-ಚಿಪ್ ಮತ್ತು ಐಸಿಐಸಿಐಯ ಷೇರು ಖರೀದಿಯೊಂದಿಗೆ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 339.51 ಪಾಯಿಂಟ್ಸ್ ಏರಿಕೆ ಕಂಡು 79,013.76ಕ್ಕೆ ತಲುಪಿದೆ. ಅದೇ ರೀತಿ ನಿಫ್ಟಿ ಕೂಡ 97.6 ಪಾಯಿಂಟ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 23,966.40ಕ್ಕೆ ತಲುಪಿದೆ.

ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್ ಡಬ್ಲ್ಯು ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಮಾರುತಿ, ಟೆಕ್ ಮಹೀಂದ್ರಾ, ಎಚ್‌ಸಿಎಲ್‌ ಟೆಕ್ನಾಲಜೀಸ್ ಮತ್ತು ಲಾರ್ಸನ್ & ಟೂಬ್ರೊ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಗಳು.

“ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಸೆನ್ಸೆಕ್ಸ್ ಅನ್ನು 80,000 ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಮತ್ತು ಟೆಲಿಕಾಂನಂತಹ ಕ್ಷೇತ್ರಗಳಲ್ಲಿ ಬಲವಾದ ಲಾರ್ಜ್ ಕ್ಯಾಪ್‌ಗಳು ಈಗ ಏರಿಕೆ ಪ್ರವೃತ್ತಿಯನ್ನು ಮುನ್ನಡೆಸುತ್ತಿವೆ” ಎಂದು ತಜ್ಞರು ಹೇಳಿದ್ದಾರೆ. ಇನ್ನು ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ವಹಿವಾಟು ಕೆಳ ಮಟ್ಟದಲ್ಲಿದೆ. ಅಮೆರಿಕ ಮಾರುಕಟ್ಟೆ ಬುಧವಾರ ಧನಾತ್ಮಕ ಅಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors) ಬುಧವಾರ 3,535.43 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಜಾಗತಿಕ ತೈಲ ಬೆಂಚ್‌ಮಾರ್ಕ್‌ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.21ರಷ್ಟು ಇಳಿದು ಬ್ಯಾರೆಲ್‌ಗೆ 85.07 ಡಾಲರ್‌ ತಲುಪಿದೆ.

ಇದನ್ನೂ ಓದಿ: MEIL: ಕೈಗಾ ಪರಮಾಣು ವಿದ್ಯುತ್‌ ಉತ್ಪಾದನೆ ಯೋಜನೆ ಜಾರಿ ಅವಕಾಶ ಗಿಟ್ಟಿಸಿದ ಎಂ.ಇ.ಐ.ಎಲ್‌

ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಬುಧವಾರ 620.73 ಪಾಯಿಂಟ್ ಅಥವಾ ಶೇ. 0.80 ರಷ್ಟು ಏರಿಕೆ ಕಂಡು 78,674.25ಕ್ಕೆ ತಲುಪಿದ್ದರೆ ನಿಫ್ಟಿ 147.50 ಪಾಯಿಂಟ್ ಅಥವಾ ಶೇ. 0.62ರಷ್ಟು ಏರಿಕೆ ಕಂಡು 23,868.80ಕ್ಕೆ ಮುಟ್ಟಿತ್ತು. ಮಂಗಳವಾರ 30 ಕಂಪನಿಗಳ ಷೇರುಗಳ ಬಿಎಸ್ಇ ಸೆನ್ಸೆಕ್ಸ್ 712.44 ಪಾಯಿಂಟ್ಸ್ ಅಥವಾ ಶೇಕಡಾ 0.92ರಷ್ಟು ಏರಿಕೆ ಕಂಡು, 78,053.52ರಲ್ಲಿತ್ತು . ದಿನದ ವಹಿವಾಟಿನ ಬೆಂಚ್ ಮಾರ್ಕ್ 823.63 ಪಾಯಿಂಟ್ ಅಥವಾ ಶೇ. 1ರಷ್ಟು ಏರಿಕೆಯಾಗಿ 78,164.71 ಅಂಕಗಳಿಗೆ ತಲುಪಿತ್ತು. ನಿಫ್ಟಿ 183.45 ಪಾಯಿಂಟ್ ಅಥವಾ ಶೇ. 0.78ರಷ್ಟು ಏರಿಕೆ ಕಂಡು 23,721.30ಕ್ಕೆ ತಲುಪಿತ್ತು.

Exit mobile version