ಮುಂಬಯಿ: ಹಿಂಡೆನ್‌ಬರ್ಗ್ ಸ್ಫೋಟಕ ವರದಿಯ ಪರಿಣಾಮ ಅದಾನಿ ಸಮೂಹದ (Adani Group) ಕಂಪನಿಗಳಲ್ಲಿ ಬಂಡವಾಳ ಹೂಡಿದ ಷೇರುದಾರರಿಗೆ ಆಘಾತವಾಗಿದೆ. ಮೂರನೇ ದಿನ ಅದಾನಿ ಷೇರುಗಳ (Adani stocks) ಮಾರುಕಟ್ಟೆ ಮೌಲ್ಯದಲ್ಲಿ ಉಂಟಾಗಿರುವ ನಷ್ಟದ ಪ್ರಮಾಣ 5.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸೋಮವಾರ ಹೂಡಿಕೆದಾರರು 1.4 ಲಕ್ಷ ಕೋಟಿ ರೂ. ಕಳೆದುಕೊಂಡರು.
ಅದಾನಿ ಸಮೂಹದ ಷೇರುಗಳ ಪೈಕಿ ಎಸಿಸಿ, ಅದಾನಿ ಎಂಟರ್‌ಪ್ರೈಸಸ್ ಮತ್ತು ಅಂಬುಜಾ ಸಿಮೆಂಟ್ ಸೋಮವಾರ ಗ್ರೀನ್ ಝೋನ್‌ಗೆ ಬಂದಿತ್ತು. ಮತ್ತೊಂದು ಕಡೆ ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ತಲಾ 20% ತನಕ ಕುಸಿಯಿತು. ಅದಾನಿ ಟ್ರಾನ್ಸ್‌ಮಿಶನ್ ಷೇರು ದರ 15% ಇಳಿಯಿತು. ಅದಾನಿ ಪೋರ್ಟ್ಸ್ ಷೇರು ದರ 0.31% ತಗ್ಗಿತು. ಅದಾನಿ ಪವರ್, ಎನ್‌ಡಿಟಿವಿ ಮತ್ತು ಅದಾನಿ ವಿಲ್ಮರ್ 5% ಲೋವರ್ ಸರ್ಕ್ಯೂಟ್‌ನಲ್ಲಿ ಇತ್ತು.
ಅದಾನಿ ಎಂಟರ್‌ಪ್ರೈಸಸ್ ಎಫ್‌ಪಿಒಗೆ 2ನೇ ದಿನವೂ ನೀರಸ ಪ್ರತಿಕ್ರಿಯೆ:
ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದ ಎರಡನೇ ದಿನವಾದ ಸೋಮವಾರ ಕೇವಲ 2% ಮಾತ್ರ ಷೇರು ವಿಕ್ರಯವಾಯಿತು.
ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದಲ್ಲಿ ದರ 3,112 -3,276 ರೂ.ಗಳಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸೋಮವಾರ ಅದಕ್ಕಿಂತ ಕಡಿಮೆ ದರಕ್ಕೆ, ಅಂದರೆ 2,882 ರೂ.ಗೆ ಸಿಗುತ್ತಿತ್ತು. ರಿಟೇಲ್ ಹೂಡಿಕೆದಾರರಿಗೆ ಕಂಪನಿ ಪ್ರತಿ ಷೇರಿಗೆ 60 ರೂ. ಡಿಸ್ಕೌಂಟ್ ನೀಡುತ್ತಿದೆ. ಹೀಗಿದ್ದರೂ, ಷೇರುದಾರರಿಗೆ 170 ರೂ. ಕಡಿಮೆ ಬೆಲೆಗೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಸಿಗುತ್ತಿದ್ದುದರಿಂದ ಎಫಪಿಒಗೆ ಬೇಡಿಕೆ ಕುಸಿದಿತ್ತು. ಎಫ್‌ಪಿಒ ನಾಳೆ (ಜ.31) ಮುಕ್ತಾಯವಾಗುತ್ತಿದೆ.