Site icon Vistara News

Business success |‌ 10,000 ರೂ.ನಿಂದ ಆರಂಭವಾದ ಶರ್ಟ್‌ ಮಾರಾಟ ಈಗ 400 ಕೋಟಿ ರೂ. ಫ್ಯಾಷನ್‌ ಬ್ರಾಂಡ್!

mufti

ಮಫ್ತಿ! ಅಂದ್ರೆ ಹಿಂದಿಯ ಪದ. ಸ್ಪೆಲ್ಲಿಂಗ್‌ Mufti ಎಂದು ಇರುವುದರಿಂದ ಮುಫ್ತಿ ಎಂದು ಗೊಂದಲಕ್ಕೀಡಾಗದಿರಿ. ಮಫ್ತಿ ಪದ ಸಶಸ್ತ್ರ ಸೇನಾ ಪಡೆಯ ಮೂಲದ್ದು. “ಕ್ಯಾಶುಯಲ್‌ ಡ್ರೆಸ್‌ʼ ಎಂಬ ಅರ್ಥ. (Business success) ಸಮವಸ್ತ್ರ ಅಲ್ಲ.

ಮುಂಬಯಿ ಮೂಲದ ಫ್ಯಾಷನ್‌ ಬ್ರಾಂಡ್ ಹೆಸರೂ ಮಫ್ತಿ. 1998 ರಲ್ಲಿ ಸಣ್ಣದಾಗಿ ಆರಂಭವಾದ ಮಫ್ತಿ ಇಂದು 120 ಮಳಿಗೆಗಳನ್ನು, 1,400 ಮಲ್ಟಿ ಬ್ರಾಂಡ್ ಔಟ್‌ಲೆಟ್‌ಗಳನ್ನು ಒಳಗೊಂಡಿದೆ. ಕಮಲ್‌ ಖುಶಲಾನಿ ಎಂಬ ಯುವಕ 24 ವರ್ಷಗಳ ಹಿಂದೆ ಹತ್ತಿರದ ಸಂಬಂಧಿಕರಿಂದ 10 ಸಾವಿರ ರೂ. ಸಾಲ ಪಡೆದು ಆರಂಭಿಸಿದ್ದ ಮಫ್ತಿ ಇಂದು ವಾರ್ಷಿಕ 400 ಕೋಟಿ ರೂ. ವಹಿವಾಟು ನಡೆಸುವ ಫ್ಯಾಷನ್‌ ಬ್ರಾಂಡ್‌ ಆಗಿ ಬೆಳೆದು ನಿಂತಿದೆ. ಶರ್ಟ್‌, ಜೀನ್ಸ್‌, ಟಿ-ಶರ್ಟ್‌, ಸ್ವೆಟರ್, ಬ್ಲೇಜರ್ಸ್‌, ಜಾಕೆಟ್‌ ಇತ್ಯಾದಿಗಳನ್ನು ಮುಫ್ತಿ ಮಾರಾಟ ಮಾಡುತ್ತದೆ. ಭಾರತೀಯ ಮೂಲದ ಜಾಗತಿಕ ಫ್ಯಾಷನ್‌ ಬ್ರಾಂಡ್‌ ಆಗುವುದು ಮಫ್ತಿಯ ಆಶಯ. ಮಫ್ತಿಯ ಯಶೋಗಾಥೆ ಕುತೂಹಲಕರ. ಬಿಸಿನೆಸ್‌ ಮಾಡಲು ಬಯಸುವವರಿಗೆ ಸ್ಪೂರ್ತಿ ನೀಡಬಲ್ಲುದು.

ಕನಸುಗಳಿದ್ದರೂ ದುಡ್ಡು ಇರಲಿಲ್ಲ: ಕಮಲ್‌ ಖುಶಲಾನಿ 1966 ರ ಸೆಪ್ಟೆಂಬರ್‌ 25ರಂದು ಜನಿಸಿದರು. ಮುಂಬಯಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವೀಧರರಾದರು. ಕಮಲ್‌ 19 ವರ್ಷದ ಯುವಕನಾಗಿದ್ದಾಗ ತಂದೆ ತೀರಿಕೊಂಡರು. ಆರಂಭದಲ್ಲೇ ಕಮಲ್‌ಗೆ ಫ್ಯಾಷನ್‌ ಪ್ರಜ್ಞೆ ಇತ್ತು. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ. ಕನಸುಗಳಿದ್ದರೂ ದುಡ್ಡಿರಲಿಲ್ಲ. ಆದರೆ ಅದು ಅವರ ಸಾಹಸಕ್ಕೆ ಅಡ್ಡಿಯಾಗಲಿಲ್ಲ.

10,000 ರೂ. ಸಾಲದಿಂದ ವ್ಯಾಪಾರ ಶುರು

ಕಮಲ್‌ ಖುಶಲಾನಿ

ಕಮಲ್‌ ಖುಶಲಾನಿ ಅವರು 1992 ರಲ್ಲಿ ಸಂಬಂಧಿಕರಿಂದ 10,000 ರೂ. ಸಾಲ ಪಡೆದು ಶರ್ಟ್‌ಗಳನ್ನು ತಯಾರಿಸಿ ಸಣ್ಣದಾಗಿ ಮಾರಾಟ ಆರಂಭಿಸಿದರು. ಆರಂಭದಲ್ಲಿ ಬಿಸಿನೆಸ್‌ಗೆ ಮಿಸ್ಟರ್‌ & ಮಿಸ್ಟರ್‌ ಎಂದು ಹೆಸರಿಟ್ಟಿದ್ದರು. ಕಮಲ್‌ ಖುಶಲಾನಿ ಒಂದು ಬೈಕ್‌ ಮತ್ತು ದೊಡ್ಡ ಸೂಟ್‌ಕೇಸ್‌ನಲ್ಲಿ 60 ಪೀಸ್‌ ಶರ್ಟ್‌ಗಳನ್ನು ತುಂಬಿಕೊಂಡು ಮಾರಾಟ ಮಾಡುತ್ತಿದ್ದರು. ಮಿಸ್ಟರ್‌ & ಮಿಸ್ಟರ್‌ಗೆ ಯಾವುದೇ ಸಿಬ್ಬಂದಿ ಇದ್ದಿರಲಿಲ್ಲ.

ಮೊದಲ ಕೆಲ ವರ್ಷ ಮನೆಯಲ್ಲಿ ಖುಶಲಾನಿ ಅವರ ಡೈನಿಂಗ್‌ ಟೇಬಲ್‌ ಮೇಲೆಯೇ ಡಿಸೈನ್‌ಗಳು ಸೃಷ್ಟಿಯಾಗುತ್ತಿತ್ತು. ಡೈನಿಂಗ್‌ ಟೇಬಲ್ ಅಡಿಯ ಸ್ಥಳವೇ ಉಡುಪುಗಳ ವೇರ್‌ ಹೌಸ್‌ ಆಗಿರುತ್ತಿತ್ತು. ಇಷ್ಟೆಲ್ಲ ಸಮಸ್ಯೆ ಇದ್ದರೂ, ತಮ್ಮ ಕೌಶಲವನ್ನು ಮತ್ತು ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಹೊಸ ಫ್ಯಾಶನ್‌ ಅಲೆಯನ್ನು ಎಬ್ಬಿಸಬೇಕು. ಅದು ದೇಶ ಮತ್ತು ಜಗತ್ತನ್ನು ವ್ಯಾಪಿಸಬೇಕು ಎಂಬ ಛಲ ಅವರಲ್ಲಿತ್ತು.

ಮಿಸ್ಟರ್‌ & ಮಿಸ್ಟರ್‌ ಬದಲಿಗೆ ಮಫ್ತಿ ಬಂತು

ಕಮಲ್‌ ಖುಶಲಾನಿ ಅವರು ಮಫ್ತಿ ಫ್ಯಾಷನ್‌ ಬ್ರಾಂಡ್‌ ಅನ್ನು 1998ರಲ್ಲಿ ಆರಂಭಿಸಿದರು. ಮಫ್ತಿ ಪದದ ಅರ್ಥವನ್ನು ಆರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಇತರ ಬ್ರಾಂಡ್‌ಗಳಿಗಿಂತ ಭಿನ್ನವಾಗಿ ಇರಬೇಕೆಂದು ಈ ಹೆಸರನ್ನು ಖುಶಲಾನಿ ಆಯ್ಕೆ ಮಾಡಿಕೊಂಡಿದ್ದರು. ಜನ ಮಫ್ತಿಯ ಶರ್ಟ್‌ಗಳು ಹೊಸ ಶೈಲಿ ಮತ್ತು ಕಂಫರ್ಟ್‌ ಹಾಗೂ ಫಿಟ್‌ ಆಗಿರುವುದನ್ನು ಕಂಡು ಇಷ್ಟಪಟ್ಟರು. ಉಡುಪುಗಳು ಹೆಚ್ಚು ಕಂಫರ್ಟ್‌ ಆಗಿರಬೇಕು ಎಂದು ಜನ ಬಯಸುತ್ತಾರೆ. ನಾವು ಅದನ್ನೇ ಗಮನದಲ್ಲಿಟ್ಟು ತಯಾರಿಸುತ್ತೇವೆ ಎನ್ನುತ್ತಾರೆ ಅವರು. ಆಗಿನ ಕಾಲದಲ್ಲಿ ಸ್ಟ್ರೆಚ್‌ ಜೀನ್ಸ್‌ ಪ್ಯಾಂಟ್‌ಗಳು ಹುಡುಗಿಯರಿಗೆ ಮಾತ್ರ ಸಿಗುತ್ತಿತ್ತು. ಕಮಲ್‌ ಅವರು ಪುರುಷರಿಗೂ ಅದನ್ನು ತಯಾರಿಸಿಕೊಟ್ಟರು. ಅದು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಯಿತು.

ಇದನ್ನೂ ಓದಿ:Business success | ಮೂವರು ಸ್ನೇಹಿತರು 2 ಲಕ್ಷ ರೂ.ಗೆ ಶುರು ಮಾಡಿದ ಬೇಕರಿಯ 75 ಕೋಟಿ ರೂ. ಬಿಸಿನೆಸ್!

ಮಹಿಳೆಯರಿಗೆ ಯಾಕಿಲ್ಲ? ಮಫ್ತಿಯ ಕಲೆಕ್ಷನ್‌ಗಳು ಪುರುಷರ ಫ್ಯಾಷನ್.‌ ವಾಸ್ತವವಾಗಿ ಕಂಪನಿ ಮಹಿಳೆಯರ ಫ್ಯಾಷನ್‌ ಉತ್ಪನ್ನಗಳನ್ನು ವಿತರಿಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಆಗ ಕಾರ್ಯತಂತ್ರ ಬದಲಿಸಲಾಯಿತು. ಪುರುಷರ ಫ್ಯಾಷನ್‌ ಗೆದ್ದಿತು. ಈಗ ಅರವಿಂದ್‌ ಮಿಲ್ಸ್‌, ಎನ್‌ಎಸ್‌ಎಲ್‌, ಕೆಜಿ ಡೆನಿಮ್‌ನಿಂದ ವಸ್ತ್ರಗಳನ್ನು ಖರೀದಿಸುತ್ತಿದೆ. ಬೆಂಗಳೂರು, ಲುಧಿಯಾನ, ತಿರುಪ್ಪೂರ್‌ನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ.

ಭಾರತದಲ್ಲಿ 90ರ ದಶಕದ ಬಳಿಕ ಜಾರಿಗೆ ಬಂದ ಆರ್ಥಿಕ ಉದಾರೀಕರಣ ನೀತಿ ಮತ್ತು ಅದರ ಪರಿಣಾಮಗಳು ಬಹುತೇಕ ಎಲ್ಲ ವಲಯಗಳ ಮೇಲೆ ತನ್ನ ಪ್ರಭಾವ ಬೀರಿದೆ. ಫ್ಯಾಷನ್‌ ಕೂಡ ಅದರಿಂದ ಹೊರತಲ್ಲ. ಇದು ಹೊಸ ಬಗೆಯ ಫ್ಯಾಷನ್‌ ಬ್ರಾಂಡ್‌ಗಳ ಹುಟ್ಟಿಗೆ ಕೂಡ ಕಾರಣವಾಗಿದೆ. ಮುಫ್ತಿಯ ಬ್ರಾಂಡ್‌ ಫಿಲಾಸಫಿಯೇ “ಗ್ರಾಹಕರಿಗೆ ಭಿನ್ನವಾದ, ಅನುಕೂಲಕರವಾದ ಉತ್ಪನ್ನಗಳನ್ನು ಕೊಟ್ಟು ಮನತಣಿಸುವುದುʼʼ. ಈ ಸಿದ್ಧಾಂತ ಎಲ್ಲ ಬಿಸಿನೆಸ್‌ ಮಾದರಿಗಳಿಗೂ ಸಾರ್ವಕಾಲಿಕ.

ಇದನ್ನೂ ಓದಿ: Business success | ಜ್ಯೋತಿಷ್ಯ ನಂಬಿರದ ಯುವಕನ ಭವಿಷ್ಯ ರೂಪಿಸಿದ ಆನ್‌ಲೈನ್‌ ಆಸ್ಟ್ರಾಲಜಿ ಸ್ಟಾರ್ಟಪ್!

Exit mobile version