ವಾಷಿಂಗ್ಟನ್: ತೈಲ ದರ ಹೆಚ್ಚಳದಿಂದ ಅಮೆರಿಕದಲ್ಲೂ ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಖ್ ಪ್ರಜೆಯೊಬ್ಬರು ದಿನಕ್ಕೆ 500 ಡಾಲರ್ ( ಅಂದಾಜು 39,000 ರೂ.) ನಷ್ಟವಾದರೂ ಪರ್ವಾಗಿಲ್ಲ ಎಂದುಕೊಂಡು, ರಿಯಾಯಿತಿ ದರದಲ್ಲಿ ಜನತೆಗೆ ಪೆಟ್ರೋಲ್ ಮಾರಾಟ ಮಾಡಿ ತಮ್ಮ ಔದಾರ್ಯವನ್ನು ಮೆರೆದಿದ್ದಾರೆ.
ಅಮೆರಿಕದ ಅರಿಝೋನಾ ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಕೇಂದ್ರದ ಮಾಲೀಕರಾಗಿರುವ ಜಸ್ವೀಂದರ್ ಸಿಂಗ್ ಎಂಬುವರು ಪ್ರತಿ ದಿನ ಖರೀದಿ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ತಮ್ಮ ಗ್ರಾಹಕರಿಗೆ ತೈಲ ಮಾರಾಟ ಮಾಡುತ್ತಿದ್ದಾರೆ.
ನನ್ನ ಹೆತ್ತವರು ಕಷ್ಟದ ಸಂದರ್ಭಗಳಲ್ಲಿ ಸಮಾಜಕ್ಕೆ ಸಹಾಯ ಮಾಡು ಎನ್ನುತ್ತಿದ್ದರು. ಆದ್ದರಿಂದ ಜನತೆಗೆ ತನ್ನಿಂದಾಗುವ ಸಹಾಯ ಮಾಡುವೆ. ದೇವರು ಸಹಕರಿಸುವ ಶಕ್ತಿ ಕೊಟ್ಟಿರುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಸರ್ದಾರ್‌ಜೀ ಅವರ ಈ ಜನಪರ ಸೇವೆ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.