ಬೆಂಗಳೂರು: ಚಿನ್ನದ (gold) ಹೊರತಾಗಿ ಎಲ್ಲರೂ ಇಷ್ಟಪಡುವ ಬೆಳ್ಳಿ ಬೆಲೆ (Silver price) ಕೂಡ ಈಗ ಗಗನಕ್ಕೆ ಏರುತ್ತಿದೆ. ಹೀಗೆ ಮುಂದುವರಿದರೆ ಬೆಳ್ಳಿ ದರ ಕೆ.ಜಿ. ಗೆ 1 ಲಕ್ಷ ರೂ.ವರೆಗೂ ತಲುಪಬಹುದು. ರಾಜಕೀಯ, ಭೌಗೋಳಿಕ ಉದ್ವಿಗ್ನತೆ ಮತ್ತು ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣಗಳ ಕಾರಣದಿಂದ ಕಳೆದ ಕೆಲವು ಸಮಯಗಳಿಂದ ಬೆಳ್ಳಿ ಬೆಲೆಯೂ ಚಿನ್ನಕ್ಕೆ ಪೈಪೋಟಿ ನೀಡುವಂತೆ ಏರಿಕೆಯಾಗುತ್ತಿದೆ ಎಂಬುದನ್ನು ಆರ್ಥಿಕ ಅಂಕಿ ಅಂಶಗಳು ತೋರಿಸುತ್ತಿವೆ.
ಕಳೆದ ವರ್ಷದಿಂದ ಬೆಳ್ಳಿಯ ಬೆಲೆಗಳಲ್ಲಿ ಶೇ. 7.19ರಷ್ಟು ಹೆಚ್ಚಾಗಿದ್ದರೆ ಚಿನ್ನದ ಬೆಲೆ ಶೇ. 13ರಷ್ಟು ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಬೆಳ್ಳಿಯ ದರದಲ್ಲಿ ಸರಿಸುಮಾರು ಶೇ. 11ರಷ್ಟು ಮತ್ತು ಚಿನ್ನದ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಏಪ್ರಿಲ್ 8ರಂದು ಬೆಳ್ಳಿ ಪ್ರತಿ ಕೆ.ಜಿ. ಗೆ 81,313 ರೂಪಾಯಿಗಳಾಗಿದ್ದರೆ, ಚಿನ್ನದ ದರ 10 ಗ್ರಾಂಗೆ 70,850 ರೂ.ಗಳಾಗಿದೆ.
ಇದನ್ನೂ ಓದಿ: Amul Chocolates: ಶೀಘ್ರವೇ ದುಬಾರಿಯಾಗಲಿದೆ ಅಮೂಲ್ ಚಾಕೊಲೇಟ್, ಐಸ್‌ಕ್ರೀಮ್!
ಹೂಡಿಕೆಗೆ ಇದು ಸಕಾಲ
ಬೆಳ್ಳಿಯ ಮೇಲೆ ಹೂಡಿಕೆಗೆ ಇದು ಸಕಾಲ. ಈಗ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಸಕಾಲ. ಕಳೆದ ಕೆಲವು ತಿಂಗಳುಗಳಿಂದ ಬೆಳ್ಳಿಯ ದರ ಏರಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿಸಿದೆ ಎಂದು ವಿತ್ತ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೆಲವು ವರ್ಷಗಳವರೆಗೆ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ನಾವು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಸಲಹೆ ನೀಡುತ್ತೇವೆ ಮತ್ತು ಬೆಳ್ಳಿ ದರ ಕೆ.ಜಿ 92,000 ರೂ. ನಿಂದ 1 ಲಕ್ಷ ರೂ. ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದುವೇಳೆ ಕುಸಿತವಾದರೂ. 75,000 ರೂ. ಗಿಂತ ಕಡಿಮೆ ಆಗಲಾರದು ಎಂದು ಪರಿಣತರು ಹೇಳಿದ್ದಾರೆ.
ಬೆಳ್ಳಿ ದರ ಏಕೆ ಹೆಚ್ಚಾಗುತ್ತಿದೆ?
ಕೋವಿಡ್ ಸಾಂಕ್ರಾಮಿಕ, ಯುದ್ಧದಂತಹ ಭೂರಾಜಕೀಯ ಉದ್ವಿಗ್ನತೆಗಳು 2020ರಿಂದ ಮಾರುಕಟ್ಟೆಯ ಮೇಲೆ ಅಪಾರ ಪರಿಣಾಮ ಬೀರಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ, ಕಳೆದ ವರ್ಷ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮತ್ತು ಇತರ ಉದ್ವಿಗ್ನತೆಗಳು ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಮಾರುಕಟ್ಟೆಯ ತಲ್ಲಣವನ್ನು ಹೆಚ್ಚಿಸಿದೆ. ಹೀಗಾಗಿ ಬೆಳ್ಳಿಯ ಮೇಲೆ ಸುರಕ್ಷಿತ ಹೂಡಿಕೆಗೆ ಬೇಡಿಕೆಯನ್ನು ಹೆಚ್ಚಿಸಿದೆ ಬೆಳ್ಳಿ ಕೇವಲ ಧರಿಸುವ ಆಭರಣಗಳಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಎಲೆಕ್ಟ್ರಾನಿಕ್ಸ್, ಸೌರಶಕ್ತಿ ಮತ್ತು ಆರೋಗ್ಯ ರಕ್ಷಣೆಯಂತಹ ವಲಯಗಳಲ್ಲೂ ಇದಕ್ಕೆ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ವಾರ್ಷಿಕ ಪೂರೈಕೆಯು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿಲ್ಲ. ಯಾಕೆಂದರೆ ಪ್ರಾಥಮಿಕ ಬೆಳ್ಳಿಯ ನಿಕ್ಷೇಪಗಳನ್ನು ಕಂಡುಹಿಡಿಯುವುದು ಕಷ್ಟ. ಅಲ್ಲದೇ ಆಟೋಮೋಟಿವ್ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ಘಟಕಗಳ ಮತ್ತು ಬ್ಯಾಟರಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಬೆಳ್ಳಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಹೀಗಾಗಿ ಬೆಳ್ಳಿ ದರಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.