ಮುಂಬಯಿ: ಭಾರತದ ಪ್ರಸಿದ್ಧ ಆಸ್ಪತ್ರೆಗಳ ಸರಣಿ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ 59% ಷೇರುಗಳನ್ನು ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್ ಹೋಲ್ಡಿಂಗ್ಸ್ ಕಂಪನಿಯು ಖರೀದಿಸಿದೆ. ಮಣಿಪಾಲ್ ಹೆಲ್ತ್‌ನಲ್ಲಿ ಈಗಾಗಲೇ 18% ಷೇರುಗಳನ್ನು ಹೊಂದಿದ್ದ ಟೆಮಾಸೆಕ್ ಅಧೀಣಧ ಶಿಯಾರ್ಸ್ ಹೆಲ್ತ್, ಹೆಚ್ಚುವರಿ 41% ಷೇರುಗಳನ್ನು ಪ್ರವರ್ತಕರು ಹಾಗೂ ಹೂಡಿಕೆದಾರರಿಂದ ಖರೀದಿಸಿದೆ. 29,000 ಕೋಟಿ ರೂ.ಗೆ ಡೀಲ್ ನಡೆದಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯೊಂದಿಗೆ ಮಣಿಪಾಲ್ ಹೆಲ್ತ್‌ನಲ್ಲಿ ಪ್ರವರ್ತಕ ರಂಜನ್ ಪೈ ಮತ್ತು ಕುಟುಂಬದ ಷೇರು ಪಾಲು 30% ಕ್ಕೆ ಇಳಿಕೆಯಾಗಿದೆ. ಹಾಲಿ ಹೂಡಿಕೆದಾರ ಟಿಪಿಜಿಯ ಷೇರು ಪಾಲು 11%ಕ್ಕೆ ಇಳಿಕೆಯಾಗಿದೆ. ಇತ್ತೀಚೆಗೆ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಕೋಲ್ಕೊತಾ ಮೂಲದ ಎಎಂಆರ್‌ಐ ಹಾಸ್ಪಿಟಲ್ಸ್ ಅನ್ನು 2,400 ಕೋಟಿ ರೂ.ಗೆ ಖರೀದಿಸಿದೆ ಎಂದು ವರದಿಯಾಗಿತ್ತು.
ಮಣಿಪಾಲ್ ಹಾಸ್ಪಿಟಲ್ಸ್ ಭಾರತದ ಎರಡನೇ ಅತಿ ದೊಡ್ಡ ಆಸ್ಪತ್ರೆಗಳ ಸರಣಿಯಾಗಿದೆ. ಇದು ಮಣಿಪಾಲ್ ಎಜುಕೇಶನ್ & ಮೆಡಿಕಲ್ ಗ್ರೂಪ್‌ನ ಭಾಗವಾಗಿದೆ.