ಮುಂಬಯಿ: ಮುಂಬಯಿ ಬಳಿ ಭಾನುವಾರ ರಸ್ತೆ ಅಪಘಾತದಲ್ಲಿ (Cyrus Mistry Death) ಅಕಾಲಿಕ ಸಾವಿಗೀಡಾಗಿರುವ ಸೈರಸ್ ಮಿಸ್ತ್ರಿ ಅವರ ಅಗಲಿಕೆಯಿಂದಾಗಿ ಈ ವರ್ಷ, ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ಗೆ ಹಠಾತ್ ಆಘಾತವಾಗಿದೆ. ಅದೂ ಸಾಮಾನ್ಯ ಕಂಪನಿ ಸಮೂಹವಲ್ಲ. ಬರೋಬ್ಬರಿ ೩೦ ಶತಕೋಟಿ ಡಾಲರ್ ( ಅಂದಾಜು 2.37 ಲಕ್ಷ ಕೋಟಿ ರೂ.) ಮಾರುಕಟ್ಟೆ ಮೌಲ್ಯದ ಬೃಹತ್ ಸಮೂಹ ಶಾಪೋರ್ಜಿ ಪಲ್ಲೋನ್‌ಜಿ. ಇದಕ್ಕೆ 157 ವರ್ಷಗಳ ಸುದೀರ್ಘ ಇತಿಹಾಸವೂ ಇದೆ.
ಪ್ರಸ್ತುತ ಸೈರಸ್ ಮಿಸ್ತ್ರಿ ಅವರ ಅಣ್ಣ ಶಾಪೋರ್ ಪಲ್ಲೋನ್‌ಜಿ ಮಿಸ್ತ್ರಿ ಇದರ ಅಧ್ಯಕ್ಷರಾಗಿದ್ದಾರೆ. ಆದರೆ ಗ್ರೂಪ್‌ಗೆ ಮಾರ್ಗದರ್ಶಕ ಮತ್ತು ಹಣಕಾಸು ತಜ್ಞರಾಗಿ ಸಲಹೆಗಳನ್ನು ನೀಡಿ ಬೆನ್ನೆಲುಬಿನಂತೆ ಇದ್ದವರೇ ಸೈರಸ್ ಮಿಸ್ತ್ರಿ. ಸೈರಸ್ ಮಿಸ್ತ್ರಿಯವರ ತಂದೆ ಪಲ್ಲೋನ್‌ಜಿ ಮಿಸ್ತ್ರಿ ಅವರು 2022ರ ಜೂನ್ 28ರಂದು ನಿಧನರಾಗಿದ್ದರು. ಇದೀಗ ಎರಡೇ ತಿಂಗಳಲ್ಲಿ ಸೈರಸ್ ಮಿಸ್ತ್ರಿಯವರ ದಿಢೀರ್ ಅಗಲಿಕೆಯಿಂದ ಶಾಪೋರ್ಜಿ ಗ್ರೂಪ್ ಕಂಗಾಲಾಗಿದೆ.
ಸೈರಸ್ ಮಿಸ್ತ್ರಿಯವರ ಅಜ್ಜ ಶಾಪೋರ್ಜಿ ಮಿಸ್ತ್ರಿ ಅವರು ಈ ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ನ ಸ್ಥಾಪಕರು. ನಿರ್ಮಾಣ, ರಿಯಲ್ ಎಸ್ಟೇಟ್, ಟೆಕ್ಸ್‌ಟೈಲ್ಸ್, ಎಂಜಿನಿಯರಿಂಗ್ ಸರಕುಗಳು, ಶಿಪ್ಪಿಂಗ್, ಹೋಮ್ ಅಪ್ಲೈಯನ್ಸ್, ವಿದ್ಯುತ್ ಮೊದಲಾದ ವಲಯಗಳಲ್ಲಿ ಸಮೂಹ ತೊಡಗಿಸಿಕೊಂಡಿದೆ.
ಸಾಲದಿಂದ ಹೊರಬರಲು ಮಿಸ್ತ್ರಿ ಸಹಕಾರ: ಶಾಪೋರ್ಜಿ ಪಲ್ಲೋನ್‌ಜಿ (ಎಸ್‌ಪಿ ಗ್ರೂಪ್) ಸಮೂಹವು ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೈರಸ್ ಮಿಸ್ತ್ರಿ ಕಾರ್ಯತಂತ್ರ ರೂಪಿಸಿದ್ದರು. ಅದು ಫಲ ಕೊಟ್ಟಿತ್ತು. ಹಾಗೂ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಗಸ್ಟ್‌ನಲ್ಲಿ ನೀಡಿದ ವರದಿಯಲ್ಲಿ ಸಮೂಹದ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿತ್ತು. ಸಮೂಹದ ಸಾಲದ ಪುನಾರಚನೆಯನ್ನು ಸೈರಸ್ ಮಿಸ್ತ್ರಿಯವರೇ ನೋಡಿಕೊಳ್ಳುತ್ತಿದ್ದರು. 2022ರ ಮಾರ್ಚ್ 31ರ ವೇಳೆಗೆ ಎಸ್‌ಪಿ ಗ್ರೂಪ್‌ನ ವಿದೇಶಿ ಮೂಲದ ಸಾಲ 23,475 ಕೋಟಿ ರೂ.ಗಳಿಂದ 13,500 ಕೋಟಿ ರೂ.ಗೆ ಇಳಿಕೆಯಾಗಿತ್ತು.
ಎಸ್‌ಪಿ ಗ್ರೂಪ್ ಶ್ರದ್ಧಾಂಜಲಿ, ನುಡಿನಮನ
ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್ ಸೈರಸ್ ಮಿಸ್ತ್ರಿಯವರ ನಿಧನಕ್ಕೆ ಕಂಬನಿ ಮಿಡಿದಿದೆ. ನುಡಿನಮನಗಳನ್ನು ಸಲ್ಲಿಸಿ ಶೋಕ ವ್ಯಕ್ತಪಡಿಸಿದೆ.
” ಸೈರಸ್ ಮಿಸ್ತ್ರಿಯವರು ಕಳೆದ ಎರಡು ದಶಕಗಳಿಂದ ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ನ ಹಲವಾರು ಮೈಲುಗಲ್ಲುಗಳ ಹಿಂದಿನ ರೂವಾರಿಯಾಗಿದ್ದರು. ಭಾರತದ ಮೊದಲ ಬಯೊಟೆಕ್ನಾಲಜಿ ಪಾರ್ಕ್, ಹಲವಾರು ವಿದ್ಯುತ್ ಘಟಕಗಳು, ರಿಯಾಲ್ಟಿ ಯೋಜನೆಗಳಿಗೆ ಮಾರ್ಗದರ್ಶನ ನೀಡಿದ್ದರು. ಅಪ್ಪಟ ಗುತ್ತಿಗೆದಾರ ಕಂಪನಿಯಂತಿದ್ದ ಸಂಸ್ಥೆಯನ್ನು ಮೌಲ್ಯವರ್ಧಿತ ಸೇವೆ ಒದಗಿಸುವ ಸಂಸ್ಥೆಯನ್ನಾಗಿಸಿದ್ದರು. ವಿನ್ಯಾಸ ಮತ್ತು ಎಂಜಿನಿಯರಿಂಗ್, ನಿರ್ಮಾಣ ಮತ್ತು ಆಸ್ತಿ ಅಭಿವೃದ್ಧಿಯ ಸಮಗ್ರ ಬಿಸಿನೆಸ್ ಗ್ರೂಪ್ ಆಗಿ ಪ್ರಗತಿ ಸಾಧಿಸುವಲ್ಲಿ ನೆರವಾಗಿದ್ದರು.
ಸಿಪಿಎಂ ಎಂದು ಕರೆಸಿಕೊಳ್ಳುತ್ತಿದ್ದ ಮಿಸ್ತ್ರಿ! ಸಿಪಿಎಂ ಎಂದು ಸಂಕ್ಷಿಪ್ತವಾಗಿ ಕರೆಸಿಕೊಳ್ಳುತ್ತಿದ್ದ ಸೈರಸ್ ಮಿಸ್ತ್ರಿ ( ಸೈರಸ್ ಪಲ್ಲೋನ್‌ಜಿ ಮಿಸ್ತ್ರಿ) ಅಧ್ಯಯನಶೀಲರಾಗಿದ್ದರು. ಸದಾ ಒಂದಿಲ್ಲೊಂದು ವಿಷಯವನ್ನು ಕಲಿಯುತ್ತಿದ್ದರು. ಪ್ರಚಾರ, ಆಡಂಬರಗಳಿಂದ ಸದಾ ಗಾವುದ ದೂರ ಇದ್ದವರು. ಜೊರಾಷ್ಟ್ರಿಯನ್ ಸಿದ್ಧಾಂತಗಳಾದ ಪ್ರಾಮಾಣಿಕತೆ, ಶ್ರದ್ಧೆ, ಪಾರದರ್ಶಕತೆಯನ್ನು ಮೈಗೂಡಿಸಿಕೊಂಡಿದ್ದರು. ಅವಕಾಶ ವಂಚಿತರಿಗೆ, ದೀನ, ದುರ್ಬಲರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದರು ಎಂದು ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್ ಕಂಬನಿ ಮಿಡಿದಿದೆ.
ಸೈರಸ್ ಮಿಸ್ತ್ರಿಯವರ ಮಕ್ಕಳು ಉತ್ತರಾಧಿಕಾರ ವಹಿಸುವರೇ? ಸೈರಸ್ ಮಿಸ್ತ್ರಿ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಫಿರೋಜ್ ಮಿಸ್ತ್ರಿ ಮತ್ತು ಜಹಾನ್ ಮಿಸ್ತ್ರಿ. ಆದರೆ ಅವರು ಸೈರಸ್ ಮಿಸ್ತ್ರಿಯವರ ಉತ್ತರಾಧಿಕಾರಿಗಳಾಗಿ ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್‌ನಲ್ಲಿ ಅಧಿಕಾರ ವಹಿಸಲು ಸಿದ್ಧರಾಗಿದ್ದಾರೆಯೇ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಇದೆ.
ಇದನ್ನೂ ಓದಿ:Cyrus Mistry Death | ಸೈರಸ್ ಮಿಸ್ತ್ರಿಯವರ ತಲೆಗೆ ಗಾಯ: ವೈದ್ಯರ ಹೇಳಿಕೆ