ನವ ದೆಹಲಿ: ಹಿಂದೂಜಾ ಸಮೂಹದ ಚೇರ್ಮನ್ ಶ್ರೀಚಂದ್ ಪರಮಾನಂದ್ ಹಿಂದೂಜಾ ಅವರು (Srichand Paramanand Hinduja) ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ನಾಲ್ವರು ಹಿಂದೂಜಾ ಸೋದರರಲ್ಲಿ ಎಸ್‌ಪಿ ಹಿಂದೂಜಾ ಹಿರಿಯರಾಗಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಲ್ಲಿದ್ದರು. ಬ್ರಿಟನ್ ಪೌರತ್ವ ಪಡೆದಿದ್ದ ಅವರು ಲಂಡನ್‌ನಲ್ಲಿ ನೆಲೆಸಿದ್ದರು. 1964ರಲ್ಲಿ ಅವರು ಬಾಲಿವುಡ್ ಸಿನಿಮಾ ಸಂಗಮ್‌ನ ಅಂತಾರಾಷ್ಟ್ರೀಯ ವಿತರಣೆಯ ಹಕ್ಕುಗಳನ್ನು ಗಳಿಸಿದ್ದರು. ಬ್ರಿಟನ್‌ನ ಸಿರಿವಂತ ಉದ್ಯಮಿಗಳಲ್ಲಿ ಅವರೂ ಒಬ್ಬರು.
ಎಸ್‌ಪಿ ಚಂದ್ ಹಾಗೂ ಅವರ ಇಬ್ಬರು ಸೋದರರ ಹೆಸರು ಬೋಫೋರ್ಸ್ ಹಗರಣದಲ್ಲಿ ಕೇಳಿ ಬಂದಿತ್ತು. ಆದರೂ ಖುಲಾಸೆಗೊಂಡಿದ್ದರು. ಹಿಂದೂಜಾ ಸಮೂಹ ಆಟೊಮೇಟಿವ್, ಹಣಕಾಸು ಸೇವೆ, ತೈಲ ಮತ್ತು ಅನಿಲ ಸೇರಿದಂತೆ ಹಲವು ವಲಯಗಳಲ್ಲಿ ಸಕ್ರಿಯವಾಗಿದೆ.
ಕರಾಚಿಯಲ್ಲಿ 1935ರ ನವೆಂಬರ್ 28ರಂದು ಎಸ್,ಪಿ ಹಿಂದೂಜಾ ಜನಿಸಿದ್ದರು. ಮುಂಬಯಿನಲ್ಲಿ ಜವಳಿ ಉದ್ದಿಮೆಯೊಂದಿಗೆ ವಹಿವಾಟು ಆರಂಭಿಸಿ, ಸಮೂಹವನ್ನು ಬೆಳೆಸಿದ್ದರು.