ನವ ದೆಹಲಿ: ಉದ್ಯಮಿಯೊಬ್ಬರಿಗೆ ೧೦ ಲಕ್ಷ ರೂ. ಮೌಲ್ಯದ ಷೇರುಗಳ ಮಾರಾಟದಲ್ಲಿ ವಂಚಿಸಿದ ಆರೋಪವನ್ನು ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಎದುರಿಸುತ್ತಿದ್ದು, ಕೇಸ್ ದಾಖಲಾಗಿದೆ. ಆದರೆ ದೂರು ಬೋಗಸ್ ಎಂದು ಏರ್‌ಲೈನ್ ಹೇಳಿದೆ.
ಅಜಯ್ ಸಿಂಗ್ ವಿರುದ್ಧ ವೈಮಾನಿಕ ವಲಯದ ಕನ್ಸಲ್ಟೆಂಟ್ ಆಗಿರುವ ಅಮಿತ್ ಅರೋರಾ ಎಂಬುವರು ವಂಚನೆಯ ದೂರು ದಾಖಲಿಸಿದ್ದಾರೆ. ಅಜಯ್ ಸಿಂಗ್ ಅವರಿಗೆ ೨೦೧೬ರಲ್ಲಿ ಕೊಟ್ಟಿದ್ದ ಸೇವೆಯೊಂದಕ್ಕೆ ಪ್ರತಿಯಾಗಿ ೧೦ ಲಕ್ಷ ರೂ. ಮೌಲ್ಯದ ಷೇರುಗಳ ನಕಲಿ ಡಿಪಾಸಿಟರಿ ಇನ್‌ಸ್ಟ್ರಕ್ಷನ್ ಸ್ಲಿಪ್ ( Depository instruction slip-DIS ) ಅನ್ನು ಕೊಟ್ಟಿದ್ದರು. ಬಳಿಕ ಹೊಸತಾಗಿ ಡಿಐಎಸ್ ಮೂಲಕ ಸ್ಪೈಸ್‌ಜೆಟ್‌ನ ೧೦ ಲಕ್ಷ ಷೇರುಗಳನ್ನು ವರ್ಗಾಯಿಸುವುದಾಗಿಯೂ ಭರವಸೆ ಕೊಟ್ಟಿದ್ದರು. ಆದರೆ ಇದೀಗ ವಂಚಿಸಿದ್ದಾರೆ. ಇತರ ಹಲವರನ್ನೂ ಇದೇ ರೀತಿಯಲ್ಲಿ ವಂಚಿಸಿದ್ದಾರೆ ಎಂದು ಅಮಿತ್ ಅರೋರಾ ದೂರಿದ್ದಾರೆ.
ಏನಿದು ಡಿಪಾಸಿಟರಿ ಇನ್‌ಸ್ಟ್ರಕ್ಷನ್ ಸ್ಲಿಪ್? ಇದು ಚೆಕ್ ಮಾದರಿಯಲ್ಲಿ ಬಳಕೆಯಾಗುವಂಥದ್ದು. ಆದರೆ ಡಿಮ್ಯಾಟ್ ಖಾತೆಗೆ ಸಂಬಂಧಿಸಿದ್ದು. ಒಂದು ಡಿಮ್ಯಾಟ್ ಖಾತೆಯಿಂದ ಮತ್ತೊಂದು ಖಾತೆಗೆ ಷೇರುಗಳನ್ನು ವರ್ಗಾವಣೆ ಮಾಡಲು ಬಳಸಲಾಗುತ್ತದೆ. ಅಜಯ್ ಸಿಂಗ್ ಕೊಟ್ಟಿದ್ದ ಸ್ಲಿಪ್‌ಗಳು ನಕಲಿಯಾಗಿತ್ತು. ಅಸಲಿ ಸ್ಲಿಪ್ ನೀಡುವಂತೆ ಹಲವು ಬಾರಿ ತಿಳಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಅಮಿತ್ ಅರೋರಾ ದೂರಿದ್ದಾರೆ.
ಆದರೆ ಅಮಿತ್ ಅರೋರಾ ದೂರನ್ನು ಬೋಗಸ್ ಎಂದು ಸ್ಪೈಸ್‌ಜೆಟ್ ವಕ್ತಾರರು ಬಣ್ಣಿಸಿದ್ದಾರೆ. ಲಿಕ್ಕರ್ ಡೀಲರ್ ಅಮಿತ್ ಅರೋರಾ ಕ್ಷುಲ್ಲಕ ಕಾರಣಕ್ಕಾಗಿ ಹಾಗೂ ಅಜಯ್ ಸಿಂಗ್ ಅವರ ತೇಜೋವಧೆಗೋಸ್ಕರ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಿತ್ ಅರೋರಾ ಅವರಿಂದ ಕಂಪನಿಯು ಯಾವುದೇ ಸೇವೆ ಪಡೆದಿಲ್ಲ, ಕೋರಿಕೆಯನ್ನೂ ಸಲ್ಲಿಸಿರಲಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಡಿಜಿಸಿಎ ಶೋಕಾಸ್ ನೋಟಿಸ್: ಈ ನಡುವೆ ಕಳೆದ ೧೮ ದಿನಗಳಲ್ಲಿ ೮ ಸಲ ತಾಂತ್ರಿಕ ಅಡಚಣೆ ದಾಖಲಾಗಿರುವುದಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಸ್ಪೈಸ್‌ಜೆಟ್‌ಗೆ ನೋಟಿಸ್ ರವಾನಿಸಿದೆ.