ನವ ದೆಹಲಿ: ಮಾಜಿ ಫುಟ್ಬಾಲ್ ಆಟಗಾರ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಸದ್ಯ ಕ್ರೀಡಾ ಆ್ಯಂಕರ್ ಆಗಿರುವ ಗ್ಯಾರಿ ಲಿನೇಕೆರ್ ಅವರನ್ನು ಸೇವೆಯಿಂದ ಅಮಾನತಿನಲ್ಲಿ ಇಟ್ಟಿರುವ ಬಿಬಿಸಿಯ (BBC) ಪತ್ರಿಕಾ ಸ್ವಾತಂತ್ರ್ಯವನ್ನು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಅವರನ್ನು ಬಿಬಿಸಿಯಿಂದ ಸಸ್ಪೆಂಡ್ ಮಾಡಲಾಗಿತ್ತು. ಗ್ಯಾರಿ ಅವರು ಬ್ರಿಟನ್ ಸರ್ಕಾರದ ವಲಸೆ ನೀತಿಯನ್ನು ಟೀಕಿಸಿದ್ದರು.
ಬಿಬಿಸಿಯು ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಕ್ಕೆ ಸಂಸ್ಥೆ ತನ್ನ ಸ್ಟಾರ್ ಆ್ಯಂಕರ್‌ರನ್ನು ಅಮಾನತುಗೊಳಿಸಿದೆ ಎಂದು ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಬಿಬಿಸಿಯು ಸಮಾಜದ ಒಂದು ವರ್ಗದ ಕೋಪಕ್ಕ ತುತ್ತಾಗಬಹುದು ಎಂಬ ಭೀತಿಯಿಂದ ಡಾಕ್ಯುಮೆಂಟರಿಯೊಂದರ ಪ್ರಸಾರವನ್ನು ಕೈಬಿಟ್ಟಿತ್ತು.
ಗ್ಯಾರಿ ಅವರು ಮ್ಯಾಚ್ ಆಫ್ ದಿ ಡೇ ಎಂಬ ಫುಟ್ಬಾಲ್ ಶೋ ಅನ್ನು ನಡೆಸುತ್ತಿದ್ದರು. ಬ್ರಿಟನ್ ಸರ್ಕಾರದ ವಲಸೆ ನೀತಿಯು 1930ರ ಜರ್ಮನಿಯ (ನಾಜಿ) ಆಡಳಿತದ ನೀತಿಯಂತಿದೆ ಎಂದು ಜಾಲತಾಣದಲ್ಲಿ ಟೀಕಿಸಿದ್ದರು.
ದೆಹಲಿ ಮತ್ತು ಮುಂಬಯಿಯಲ್ಲಿರುವ ಬಿಬಿಸಿ ಬ್ರಿಟಿಷ್ ಮಾಧ್ಯಮ ಸಂಸ್ಥೆಯ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ರೇಡ್ (IT Raid On BBC) ಮಾಡಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಮೊಬೈಲ್, ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಿದ್ದಾರೆ. ಬಿಬಿಸಿ ವಿರುದ್ಧ, ಅಂತಾರಾಷ್ಟ್ರೀಯ ತೆರಿಗೆ ನಿಯಮಗಳ ಉಲ್ಲಂಘನೆ ಮತ್ತು ಹಣ ವರ್ಗಾವಣೆ ಅಕ್ರಮದ ಆರೋಪ ಕೇಳಿಬಂದಿದ್ದರಿಂದ ಐಟಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಕೆಲ ತಿಂಗಳಿನ ಹಿಂದೆ ಬಿಬಿಸಿ ಮಾಧ್ಯಮ ಸಂಸ್ಥೆಯು ಪ್ರಧಾನಿ ಮೋದಿಯವರ ಬಗ್ಗೆ ‘ಇಂಡಿಯಾ; ದಿ ಮೋದಿ ಕ್ವಶ್ಚನ್’ ಎಂಬ ಒಂದು ಡಾಕ್ಯುಮೆಂಟರಿ ನಿರ್ಮಿಸಿ ಪ್ರಸಾರ ಮಾಡಿತ್ತು. 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಮೋದಿ ಪಾತ್ರ ಇದೆ ಎಂಬಂತೆ ಈ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಿದ್ದು, ವಿವಾದ ಸೃಷ್ಟಿಯಾಗಿತ್ತು. ಡಾಕ್ಯುಮೆಂಟರಿಯ ಲಿಂಕ್ಗಳನ್ನೆಲ್ಲ ಸಾಮಾಜಿಕ ಜಾಲತಾಣಗಳಿಂದ ಕೇಂದ್ರ ಸರ್ಕಾರ ತೆಗೆಸಿತ್ತು. ಈಗ ಅದರ ಬೆನ್ನಲ್ಲೇ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿಯಾಗಿತ್ತು.