ವಿಶ್ವದ ಅತಿ ದೊಡ್ಡ ಕಾಫಿ ಕೆಫೆಗಳ ಸರಣಿ, ಅಮೆರಿಕ ಮೂಲದ ಸ್ಟಾರ್ಬಕ್ಸ್ನಲ್ಲಿ ಸಿಗುವ ಕಾಫಿಯ ಗೆಟಪ್ಪೇ ಬೇರೆ. ಒಂದು ಕಪ್ ಕಾಫಿಯ ದರವೇ ಕನಿಷ್ಠ 250 ರೂ.ಗಳಿಂದ ಆರಂಭವಾಗುತ್ತದೆ. 400 ರೂ.ಗಳಿಂದ 700 ರೂ. ತನಕ ಒಂದು ಲೋಟ ಕಾಫಿಯ ದರ ಇರುತ್ತದೆ. ಅಮೆರಿಕ ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ಕಾಫಿ ಕೆಫೆಗಳ ಸರಣಿ (Starbucks) ಎಂಬ ಹೆಗ್ಗಳಿಕೆ ಬೇರೆ. ವಿಶ್ವಾದ್ಯಂತ ಸ್ಟಾರ್ ಬಕ್ಸ್ನಲ್ಲಿ 3.83 ಲಕ್ಷ ಉದ್ಯೋಗಿಗಳಿದ್ದಾರೆ. ಇಂಥ ದಿಗ್ಗಜ ಕಂಪನಿಯ ನೂತನ ಸಾರಥಿಯಾಗಿ ಭಾರತೀಯರೊಬ್ಬರು ಆಯ್ಕೆಯಾಗಿದ್ದಾರೆ ಎಂಬುದೇ ಅಭಿಮಾನದ ವಿಷಯ. ಏಕೆಂದರೆ ಗೂಗಲ್ನ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್ನ ಸತ್ಯ ನಾಡೆಳ್ಳಾ, ಟ್ವಿಟರ್ನ ಪರಾಗ್ ಅಗ್ರವಾಲ್, ಐಬಿಎಂನ ಅರವಿಂದ್ ಕೃಷ್ಣ, ಅಡೋಬ್ನ ಶಂತನು ನಾರಾಯಣನ್ ಮೊದಲಾದ ಭಾರತೀಯ ಮೂಲದ ಘಟಾನುಘಟಿ ಸಿಇಒಗಳ ಸಾಲಿಗೆ ಇದೀಗ ಮತ್ತೊಬ್ಬರ ಸೇರ್ಪಡೆಯಾದಂತಾಗಿದೆ.
2021 ರ ನವೆಂಬರ್ ವೇಳೆಗೆ ಸ್ಟಾರ್ಬಕ್ಸ್ 80 ದೇಶಗಳಲ್ಲಿ 33.833 ಕಾಫಿ ಶಾಪ್ಗಳನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಲ್ಲೂ ಹರಡಿದೆ. ಇಂಥ ದಿಗ್ಗಜ ಕಂಪನಿಯ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕವಾಗಿದ್ದಾರೆ. ಸ್ವಾರಸ್ಯವೇನೆಂದರೆ ಸ್ಟಾರ್ಬಕ್ಸ್ ಮಾದರಿಯ ಸರಣಿ ಕೆಫೆ ಅಥವಾ ರೆಸ್ಟೊರೆಂಟ್ ಬಿಸಿನೆಸ್ ಎನ್ನುವುದು ಲಕ್ಷ್ಮಣ್ ನರಸಿಂಹನ್ ಅವರಿಗೆ ಹೊಸತು. ಅದರಲ್ಲಿ ಅವರಿಗೆ ಇದುವರೆಗೆ ಯಾವುದೇ ವೃತ್ತಿಪರ ಅನುಭವ ಇಲ್ಲ! ಹೀಗಿದ್ದರೂ ಸ್ಟಾರ್ಬಕ್ಸ್ ಸಾರಥ್ಯ ಅವರಿಗೆ ಒಲಿದಿದೆ! ಇದಕ್ಕೆ ಕಾರಣ ಅವರ ನಾಯಕತ್ವ, ಪ್ರತಿಭೆಯಲ್ಲಿ ಈ ಹಿಂದಿನ ಕಂಪನಿಯ ಬೆಳವಣಿಗೆ ಆಗಿರುವುದು.
ಸ್ಟಾರ್ಬಕ್ಸ್ನ ನೂತನ ಸಿಇಒ ಆಗಿ ಆಯ್ಕೆಯಾಗಿರುವ ಲಕ್ಷ್ಮಣ್ ನರಸಿಂಹನ್ ಅವರ ಬಗ್ಗೆ ಆಸಕ್ತಿಕರ ಹಾಗೂ ಸ್ಪೂರ್ತಿದಾಯಕ ಸಂಗತಿಗಳನ್ನು ತಿಳಿಯೋಣ ಬನ್ನಿ.
- ಲಕ್ಷ್ಮಣ್ ನರಸಿಂಹನ್ ಅವರು ಪುಣೆಯಲ್ಲಿ 1968 ರಲ್ಲಿ ಜನಿಸಿದರು. ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಓದಿದವರು. ಅಮೆರಿಕದ ವಾರ್ಟನ್ ಬಿಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಪಡೆದರು.
- ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ನ ಬಹುರಾಷ್ಟ್ರೀಯ ಕನ್ಸ್ಯೂಮರ್ ಗೂಡ್ಸ್ ವಲಯದ ರೆಕಿಟ್ ಬೆನ್ಕಿಸೆರ್ ಕಂಪನಿಯ ಸಿಇಒ ಆಗಿದ್ದರು. ಅದಕ್ಕೂ ಮುನ್ನ ಪೆಪಿಸಿಕೊ ಕಂಪನಿಯಲ್ಲಿ ಮುಖ್ಯ ವಾಣಿಜ್ಯ ಅಧಿಕಾರಿಯಾಗಿದ್ದರು. ಇದೀಗ ಸ್ಟಾರ್ಬಕ್ಸ್ನ ಹಾವರ್ಡ್ ಶೋಸ್ ಅವರ ಬದಲಿಗೆ ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ.
- ಇಂಗ್ಲೆಂಡ್ನ ರೆಕಿಟ್ ಬೆನ್ಕಿಸೆರ್ ಗ್ರೂಪ್ನ ಸಿಇಒ ಆಗಿದ್ದ ಲಕ್ಷ್ಮಣ್ ನರಸಿಂಹನ್ ಅವರು ಆಗಲೂ ಆರಂಭದಲ್ಲಿ ಕನ್ಸ್ಯೂಮರ್ ಹೆಲ್ತ್ಕೇರ್ ಉದ್ದಿಮೆ ಅವರಿಗೆ ಅಪರಿಚಿತವಾಗಿತ್ತು. ಏಕೆಂದರೆ ಅದಕ್ಕೂ ಮೊದಲು ಅವರು ಪೆಪ್ಸಿಕೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲೈಸೋಲ್ ಮತ್ತು ಡ್ಯೂರೆಕ್ಸ್ ಕಾಂಡೋಮ್ ಉತ್ಪಾದಕ ರೆಕಿಟ್ ಗ್ರೂಪ್ಗೆ ಸೇರಿದಾಗ ಸಂಸ್ಥೆ ಸಂಕಷ್ಟದಲ್ಲಿತ್ತು. ಹಗರಣಗಳು ಮತ್ತು ಬಿಸಿನೆಸ್ ವೈಫಲ್ಯದ ಸಮಸ್ಯೆ ಇತ್ತು. ಆದರೆ ನರಸಿಂಹನ್ ನೇತೃತ್ವದಲ್ಲಿ ಆ ಕಂಪನಿ ಸುಧಾರಿಸಿತು. ನರಸಿಂಹನ್ ಬದಲಾವಣೆಗಳನ್ನು ಎದುರಿಸಲು ಮತ್ತು ಅಳವಡಿಸಿಕೊಳ್ಳಲು ಹಿಂಜರಿಯುವುದಿಲ್ಲ.
- ರೆಕಿಟ್ ಗ್ರೂಪ್ಗೆ ಪೆಪ್ಸಿಕೊದ ನುರಿತ ಉದ್ಯೋಗಿಗಳನ್ನು ಕರೆ ತಂದರು. ಕಂಪನಿಯ ಸಿಬ್ಬಂದಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿ ನೋಡಿದರು. ಅಲ್ಪಕಾಲದಲ್ಲೇ ರೆಕಿಟ್ನ ಇಡೀ ತಂಡವನ್ನೇ ಬಲಿಷ್ಠಪಡಿಸಿದರು. ಕಂಪನಿಯ ಹೂಡಿಕೆ ಮತ್ತು ಬೆಳವಣಿಗೆಯ ಆದ್ಯತೆಗೆ ಕಾರ್ಯತಂತ್ರ ರೂಪಿಸಿದರು. ಬಲ್ಲವರ ಪ್ರಕಾರ ನರಸಿಂಹನ್ ಸ್ಟಾರ್ಬಕ್ಸ್ನಲ್ಲೂ ಆಮೂಲಾಗ್ರ ಬದಲಾವಣೆ ತರಬಲ್ಲರು. ಹಾಗೂ ಹೊಸ ಕಾರ್ಯತಂತ್ರಗಳಿಂದ ಸುಧಾರಿಸಬಲ್ಲರು.
- ಲಕ್ಷ್ಮಣ್ ನರಸಿಂಹನ್ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುತ್ತಾರೆ. ಅಲ್ಲಿ ವೃಥಾ ವಿಳಂಬ ಇರುವುದಿಲ್ಲ. ಒಂದು ಸಲ ರೆಕಿಟ್ನ ಹಣಕಾಸು ಫಲಿತಾಂಶ ಪ್ರಕಟಣೆಯ ಮುನ್ನಾ ದಿನ ಮೆಟ್ಟಿಲುಗಳಿಂದ ಬಿದ್ದು ಮೊಣಕೈ ಮುರಿದಿತ್ತು. ಆದರೆ ಮರುದಿನ ಕಂಪನಿಯ ವ್ಯವಹಾರಗಳನ್ನು ಎಂದಿನಂತೆ ಮುನ್ನಡೆಸಿದ್ದರು.
- ಸಂಗೀತ, ಹಾಸ್ಯಪ್ರಜ್ಞೆ: ಲಕ್ಷ್ಮಣ್ ನರಸಿಂಹನ್ ಅವರು ಬಿಸಿನೆಸ್ ಮತ್ತು ವ್ಯವಹಾರಗಳಿಗೆ ಸಂಬಂಧಿಸಿ ಶಿಸ್ತುಬದ್ಧ ಮತ್ತು ಕಠಿಣ ಪರಿಶ್ರಮಿ. ಆದರೆ ಅವರ ಮತ್ತೊಂದು ಮುಖ ಸಂಗೀತದಲ್ಲಿ ಅಪಾರ ಆಸಕ್ತ. ಹಾಸ್ಯಪ್ರಜ್ಞೆ, ವಿನೋದ ಪ್ರವೃತ್ತಿ ಎನ್ನುತ್ತಾರೆ ಅವರ ಸ್ನೇಹಿತರು. ಬಜಾಜ್ ಆಟೊ ಎಂ.ಡಿ ರಾಜೀವ್ ಬಜಾಜ್ ಮತ್ತು ಲಕ್ಷ್ಮಣ್ ನರಸಿಂಹನ್ ಸಹಪಾಠಿಗಳಾಗಿದ್ದರು.