Site icon Vistara News

ಸುಂಕ ಕಡಿತದ ಪರಿಣಾಮ ಉಕ್ಕು, ಸಿಮೆಂಟ್‌, ಕಬ್ಬಿಣದ ಬೆಲೆ ಇಳಿಕೆ ನಿರೀಕ್ಷೆ

iron

ಹೊಸದಿಲ್ಲಿ: ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರಕಾರ, ಕೈಗಾರಿಕೋದ್ಯಮಗಳಲ್ಲಿ ವ್ಯಾಪಕ ಬಳಕೆಯಲ್ಲಿರುವ ಕಬ್ಬಿಣ, ಉಕ್ಕು ಮತ್ತು ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಸ್ಥಳೀಯವಾಗಿ ಉಕ್ಕು, ಕಬ್ಬಿಣ, ಸಿಮೆಂಟ್‌, ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆಯ ವೆಚ್ಚ ಇಳಿಕೆಯಾಗಲಿದೆ. ಇದರಿಂದ ಇವುಗಳ ಬೆಲೆ ಇಳಿಕೆಯಾಗಿ ಕಟ್ಟಡ, ಮನೆ ನಿರ್ಮಾಣ ವೆಚ್ಚ ತಗ್ಗುವ ನಿರೀಕ್ಷೆ ಉಂಟಾಗಿದೆ. ಪ್ರಾಪರ್ಟಿ ಡೆವಲಪರ್‌ಗಳಿಗೆ ಅನುಕೂಲವಾಗಲಿದೆ.

ಸರಕಾರ ಕಚ್ಚಾ ವಸ್ತುಗಳ ಸುಂಕ ಕಡಿತ ಮಾಡಿರುವುದರಿಂದ ರಿಯಾಲ್ಟಿ ಡೆವಲಪರ್‌ ಗಳು ನಿರ್ಮಾಣ ವೆಚ್ಚದಲ್ಲಿ ಉಂಟಾಗುವ ಉಳಿತಾಯದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಇದರಿಂದ ಮನೆ ಖರೀದಿಸಲು ಬಯಸುವವರಿಗೆ ಅನುಕೂಲವಾಗಲಿದೆ ಎಂದು ಕ್ರೆಡಾಯ್‌ ಅಧ್ಯಕ್ಷ ಹರ್ಷವರ್ಧನ್‌ ಪಟೋಡಿಯಾ ತಿಳಿಸಿದ್ದಾರೆ.

ಸರಕಾರ ಕಬ್ಬಿಣದ ಅದಿರು ರಫ್ತಿನ ಮೇಲೆ ಸುಂಕವನ್ನು ಶೇ.50ರಷ್ಟು ಏರಿಸಿದೆ. ಇದರಿಂದ ಸ್ಥಳೀಯ ಉತ್ಪಾದಕರಿಗೆ ಅನುಕೂಲವಾಗಲಿದೆ. ಕೇಂದ್ರ ಸರಕಾರ ದರ ಏರಿಕೆಯಿಂದ ರೈತರಿಗೆ ರಕ್ಷಣೆ ನೀಡಲು ರಸಗೊಬ್ಬರ ವಲಯಕ್ಕೆ ಹೆಚ್ಚುವರಿ 1.10 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿ 2ರಿಂದ 2.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಭಾರತವು ಯೂರಿಯಾ, ಪೊಟಾಸಿಕ್‌, ಫಾಸ್ಪಟಿಕ್‌ ರಸಗೊಬ್ಬರಗಳನ್ನು ಆಮದು ಮಾಡುತ್ತದೆ. ರಷ್ಯಾ-ಉಕ್ರೇನ್‌ ಸಮರದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳ ದರ ಗಗನಕ್ಕೇರಿದೆ.

ಇದನ್ನೂ ಓದಿ: Explainer: ಬೆಲೆ ಏರಿಕೆ ಬಿಸಿ ಹೆಚ್ಚಿಸುತ್ತಿರುವ ಆಮದು!

Exit mobile version