ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಉಕ್ಕು, ಕಬ್ಬಿಣದ ದರಗಳು (steel prices) ಇಳಿಕೆಯಾಗಿವೆ. ಕಬ್ಬಿಣದ ಅದಿರು ಉತ್ಪಾದನೆಯಲ್ಲೂ ಚೇತರಿಕೆ ಕಂಡು ಬಂದಿದೆ. ಇವೆರಡು ಕಚ್ಚಾ ಸಾಮಾಗ್ರಿಗಳ ಕೊರತೆಯಿಂದ ನಿರ್ಮಾಣ ಮತ್ತು ಮೂಲಸೌಕರ್ಯ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರಿ ಸಮಸ್ಯೆಯಾಗಿತ್ತು.
ಕೇಂದ್ರ ಸರಕಾರ ಉಕ್ಕಿನ ರಫ್ತಿಗೆ ಸುಂಕ ವಿಧಿಸಿದ ಎರಡು ವಾರಗಳಲ್ಲಿ ಉಕ್ಕಿನ ದರ ಇಳಿಕೆಯಾಗಿದೆ. ಸರಕಾರ ಮೇ 22ರಿಂದ ಅನ್ವಯವಾಗುವಂತೆ 15% ರಫ್ತು ಸುಂಕವನ್ನು ವಿಧಿಸಿತ್ತು. ಕಲ್ಲಿದ್ದಲು ಆಮದು ಸುಂಕವನ್ನೂ ಕಡಿತಗೊಳಿಸಲಾಗಿತ್ತು. ಇದು ಸಿಮೆಂಟ್ ಉತ್ಪಾದನೆಗೆ ಅವಶ್ಯಕ. ಮಾರುಕಟ್ಟೆಯಲ್ಲಿ ಉಕ್ಕಿನ ಬೇಡಿಕೆ ಇಳಿಮುಖವಾಗಿರುವುದೂ ಮತ್ತೊಂದು ಕಾರಣವಾಗಿದೆ. ಬ್ರಿಟನ್, ಅಮೆರಿಕ, ಚೀನಾದಲ್ಲೂ ಉಕ್ಕಿನ ದರಗಳು ಇಳಿಕೆಯಾಗಿವೆ.
ಉಕ್ಕಿನ ದರದಲ್ಲಿ ಮೇ 18ರಂದು ಪ್ರತಿ ಟನ್ನಿಗೆ 5,500 ರೂ. ಇಳಿಕೆಯಾಗಿದ್ದು, 63,800 ರೂ.ಗೆ ತಗ್ಗಿದೆ ಎಂದು ಮಾರುಕಟ್ಟೆ ವಲಯದ ಸ್ಟೀಲ್ ಮಿಂಟ್ ವರದಿ ತಿಳಿಸಿದೆ. ಎಚ್‌ಆರ್‌ಸಿ ಉಕ್ಕಿನ ದರ ಕಳೆದ ಏಪ್ರಿಲ್ ನಲ್ಲಿ ಟನ್ನಿಗೆ 78,800 ರೂ.ಗಳ ಉನ್ನತ ಮಟ್ಟಕ್ಕೆ ಜಿಗಿದಿತ್ತು. ಬಳಿಕ ವಾರಕ್ಕೆ 2,000-3000 ರೂ.ಗಳ ಸರಾಸರಿಯಲ್ಲಿ ತಗ್ಗಿದೆ. ಈ ನಡುವೆ ಕಲ್ಲಿದ್ದಲು ದರದಲ್ಲೂ ಇಳಿಕೆಯಾಗಿದೆ.
ಮುಂಬರುವ ದಿನಗಳಲ್ಲಿ ಉಕ್ಕು, ಕಬ್ಬಿಣ ದರಗಳು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಸಿಮೆಂಟ್ ದರ ದುಬಾರಿ
ಉಕ್ಕು ಮತ್ತು ಕಬ್ಬಿಣದ ದರದಲ್ಲಿ ಇಳಿಕೆಯಾಗಿದ್ದರೂ, ಸಿಮೆಂಟ್ ದರ ಮಾತ್ರ ಏರುಗತಿಯಲ್ಲಿದೆ. ಕಟ್ಟಡ ನಿರ್ಮಾಣದಲ್ಲಿ ನಿರ್ಣಾಯಕವಾಗಿರುವ ಸಿಮೆಂಟ್ ದರ ಇಳಿಕೆಯಾಗಬೇಕು ಎಂದು ಜನ ಸಾಮಾನ್ಯರು, ಬಿಲ್ಡರ್ ಗಳು ಬಯಸುತ್ತಿದ್ದಾರೆ. ಕೋವಿಡ್ ಬಂದ ಬಳಿಕ ಸಿಮೆಂಟ್ ದರದಲ್ಲಿ ಒಟ್ಟಾರೆ 60-70% ಹೆಚ್ಚಳವಾಗಿದೆ. ಕೋವಿಡ್-19ಕ್ಕೆ ಮೊದಲು ಪ್ರತಿ ಸಿಮೆಂಟ್ ಚೀಲದ ದರ 200 ರೂ. ಇದ್ದರೆ ಈಗ 350 ರೂ.ಗೆ ಏರಿದೆ.