Site icon Vistara News

ವಿಸ್ತಾರ Money Guide | stock market | ಆರ್ಥಿಕ ಹಿಂಜರಿತದ 2023ರಲ್ಲಿ ಷೇರು ಹೂಡಿಕೆಗೆ 7 ಉಪಯುಕ್ತ ಸಲಹೆ

stock trading

ಹೊಸ ವರ್ಷ 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ (stock market) ಜಗತ್ತನ್ನು ಆವರಿಸಲಿದೆ ಎಂದು ಬಹುತೇಕ ತಜ್ಞರು ಹೇಳುತ್ತಿದ್ದಾರೆ. ಒಂದು ವೇಳೆ ಆರ್ಥಿಕ ಹಿಂಜರಿತ ಸಂಭವಿಸಿದರೆ, ಅಂಥ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಹೇಗೆ ಮಾಡಬಹುದು ಎಂಬುದಕ್ಕೆ 7 ಉಪಯುಕ್ತ ಸಲಹೆಗಳು ಇಲ್ಲಿವೆ.

ಬ್ಲೂಚಿಪ್‌ ಕಂಪನಿಗಳಲ್ಲಿ ಹೂಡಿಕೆ

ಬ್ಲೂಚಿಪ್‌ ಕಂಪನಿಗಳು ಎಂದರೆ 20 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿರುವ ಬಲಾಢ್ಯ ಕಂಪನಿಗಳು. ಅಲ್ಪ ದರದಲ್ಲಿ ಸಿಗುವ ಪೆನ್ನಿ ಸ್ಟಾಕ್‌ಗಳನ್ನು ಖರೀದಿಸುವುದಕ್ಕಿಂತಲೂ, ಬ್ಲೂಚಿಪ್‌ ಷೇರುಗಳು ಸೂಕ್ತ ಎನ್ನುತ್ತಾರೆ ತಜ್ಞರು. ಬ್ಲೂಚಿಪ್‌ ಕಂಪನಿಯ ಕಳೆದ ಐದು ವರ್ಷಗಳ ಇತಿಹಾಸ, ಲಾಭ-ನಷ್ಟ- ಆದಾಯ ವಿವರಗಳನ್ನು ಅರಿತುಕೊಂಡು ಹೂಡಿಕೆ ಮಾಡುವುದು ಸೂಕ್ತ. ಉದಾಹರಣೆಗೆ ಕಂಪನಿಯ ಸಾಲದ ಅನುಪಾತವು ಈಕ್ವಿಟಿಯ 50%ಕ್ಕಿಂತ ಕೆಳಗಿರಬೇಕು. ಕಳೆದ ಐದು ವರ್ಷದಲ್ಲಿ ಆದಾಯ ಸರಾಸರಿ 10% ಲೆಕ್ಕದಲ್ಲಿ ವೃದ್ಧಿಸಿದ್ದರೆ ಒಳ್ಳೆಯದು ಎನ್ನುತ್ತಾರೆ ಹಣಕಾಸು ಸಲಹೆಗಾರರು.

ಯಾವುದೋ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ, ಸ್ಥಿರವಾದ ಮತ್ತು ಕಳೆದ ಕೆಲ ವರ್ಷಗಳಿಂದ ಉತ್ತಮ ಆದಾಯ, ಲಾಭ ಗಳಿಸುತ್ತಿರುವ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿ, ಅದರ ಬಗ್ಗೆ ಅಧ್ಯಯನ ಮಾಡಿಕೊಂಡು ಹೂಡಿಕೆ ಮಾಡುವುದು ಸೂಕ್ತ.

ಮ್ಯೂಚುವಲ್‌ ಫಂಡ್

ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿರುತ್ತದೆ. ಇಂಥ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆರ್ಥಿಕ ಮಂದಗತಿಯ ಸಂದರ್ಭ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದಾಗಿ, ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದರಲ್ಲಿನ ರಿಸ್ಕ್‌ನಿಂದ ದೂರವಿರಬಹುದು. ಎರಡನೆಯದಾಗಿ ಮಾರುಕಟ್ಟೆ ಏರುಗತಿಯನ್ನು ಪಡೆದಾಗ, ಹೂಡಿಕೆ ಕೂಡ ವೃದ್ಧಿಸುವಂಥ ಮ್ಯೂಚುವಲ್‌ ಇಂಡೆಕ್ಸ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ. ನಿಫ್ಟಿ 50 ಇಂಡೆಕ್ಸ್‌ ಅಂಥ ಇಂಡೆಕ್ಸ್‌ ಫಂಡ್‌ಗೆ ಒಂದು ಉದಾಹರಣೆಯಾಗಿದೆ.

ಸೆಕ್ಟೋರಲ್‌ ಇಟಿಎಫ್/ ಮ್ಯೂಚುವಲ್‌ ಫಂಡ್

ಆರ್ಥಿಕ ಹಿಂಜರಿತದ ಸಂದರ್ಭ ಕೆಲವು ವಲಯಗಳು ಮುಗ್ಗರಿಸುತ್ತವೆ. ಮತ್ತೆ ಕೆಲವು ವಲಯಗಳು ಚೆನ್ನಾಗಿ ಪ್ರಗತಿ ದಾಖಲಿಸುತ್ತವೆ. ಆದ್ದರಿಂದ ಸೆಕ್ಟರ್‌ (ವಲಯ) ಆಧಾರಿತ ಇಟಿಎಫ್‌ ಅಥವಾ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಉದಾಹರಣೆಗೆ ಪ್ರವಾಸೋದ್ಯಮ, ಹೋಟೆಲ್‌, ಮನರಂಜನೆ ವಲಯ ಮುಗ್ಗರಿಸಿತ್ತು. ಆದರೆ ತಂತ್ರಜ್ಞಾನ, ಕೃಷಿ, ಔಷಧ ವಲಯ ಗಣನೀಯ ಚೇತರಿಸಿತ್ತು. ಆದ್ದರಿಂದ ಆಟೊಮೊಬೈಲ್‌, ಇಂಧನ, ಲಾಜಿಸ್ಟಿಕ್ಸ್‌, ಮೂಲಸೌಕರ್ಯ ವಲಯದ ಇಟಿಎಫ್‌, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಬಹುದು.

ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ

ಆರ್ಥಿಕ ಹಿಂಜರಿತದ ಸಂದರ್ಭ ರಿಯಾಲ್ಟಿ ವಲಯದಲ್ಲಿ ಹೂಡಿಕೆ ಮಾಡಬಹುದು. ಏಕೆಂದರೆ ಸಾಮಾನ್ಯವಾಗಿ ರಿಸೆಶನ್‌ ಸಂದರ್ಭ ರಿಯಾಲ್ಟಿ ಕ್ಷೇತ್ರ ಸ್ಥಿರವಾಗಿರುತ್ತದೆ. ಆದರೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆಗೆ ದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ. ಇದಕ್ಕೇನು ಪರಿಹಾರ ಎನ್ನುವಿರಾ? ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ನಲ್ಲಿ (Real Estate Investment Trusts) ಹೂಡಿಕೆ ಮಾಡಬಹುದು. ಇದರಲ್ಲಿ ಸಣ್ಣ ಮೊತ್ತದಲ್ಲೂ ಹೂಡಿಕೆ ಮಾಡಬಹುದು.

ನಿಗದಿತ ಆದಾಯ/ ಡಿವಿಡೆಂಡ್‌ ಸ್ಟಾಕ್

ಆರ್ಥಿಕ ಹಿಂಜರಿತದ ಅವಧಿಯಲ್ಲಿ ನಿಗದಿತ ಆದಾಯಕ್ಕಾಗಿ ಕಾರ್ಪೊರೇಟ್‌ ಬಾಂಡ್‌ ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಆದ್ದರಿಂದ ಉತ್ತಮ ರೇಟಿಂಗ್‌ ಇರುವ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. Triple-A ಅಥವಾ Double-A ರೇಟಿಂಗ್‌ ಇರುವ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

ಡಿವಿಡೆಂಡ್‌ ಸ್ಟಾಕ್ಸ್‌ ಎಂದರೆ ನಿಯಮಿತವಾಗಿ ಡಿವಿಡೆಂಡ್‌ಗಳನ್ನು ನೀಡುವ ಷೇರುಗಳು. ಆರ್ಥಿಕ ಹಿಂಜರಿತದ ಅವಧಿಯಲ್ಲಿ ಇದು ನಿಯಮಿತ ಆದಾಯವನ್ನು ಕೊಡುತ್ತದೆ.

ಚಿನ್ನದಲ್ಲಿ ಹೂಡಿಕೆ

ಆರ್ಥಿಕ ಹಿಂಜರಿತದ ಸಂದರ್ಭ ಹಲವಾರು ಮಂದಿ ಬಂಗಾರದಲ್ಲಿ ಹೂಡುತ್ತಾರೆ. ಸಾಮಾನ್ಯವಾಗಿ ರಿಸೆಶನ್‌ ಅವಧಿಯಲ್ಲಿ ಬಂಗಾರದ ದರಗಳು ಸ್ಥಿರವಾಗಿ ಇರುವುದು ಇದಕ್ಕೆ ಕಾರಣ. ಹಲವಾರು ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಲು ಚಿನ್ನದ ಆಭರಣಗಳನ್ನು ಖರೀದಿಸುತ್ತಾರೆ. ಅದು ಸಮಂಜಸವಲ್ಲ. ಬಂಗಾರದಲ್ಲಿ ಹೂಡಿಕೆಗೆ ಡಿಜಿಟಲ್‌ ಗೋಲ್ಡ್‌ ಅಥವಾ ಸವರಿನ್‌ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.‌

ವಿದೇಶಗಳಲ್ಲಿ ಹೂಡಿಕೆಯ ಆಯ್ಕೆ

ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿದೇಶಗಳಲ್ಲಿ ಕೂಡ ಹೂಡಿಕೆ ಮಾಡಬಹುದು. ಅನೇಕ ಮಂದಿ ಅಮೆರಿಕದ ಸ್ಟಾಕ್‌ ಮಾರುಕಟ್ಟೆಯಲ್ಲೂ ಖರೀದಿಸುತ್ತಾರೆ.

ಎಲ್ಲರಿಗಿಂತ ಒಳ್ಳೆಯ ಹೂಡಿಕೆದಾರ ಮಾರುಕಟ್ಟೆ ಇಳಿಕೆಯಾಗಿದ್ದಾಗ ಷೇರುಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ಸೂಚ್ಯಂಕ ಏರುಗತಿಯಲ್ಲಿದ್ದಾಗ ಷೇರುಗಳನ್ನು ವಿಕ್ರಯಿಸುತ್ತಾರೆ.

Exit mobile version