ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶಗಳು (Q3 Results) ಷೇರು ಪೇಟೆ ಮೇಲೆ ಪರಿಣಾಮ ಬೀರಿದ್ದು, ಸೋಮವಾರ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ (BSE Sensex) 73 ಸಾವಿರ ಅಂಕಗಳನ್ನು ದಾಟಿದೆ. ಅದೇ ವೇಳೆ, ಎನ್‌ಎಸ್‌ಇ ನಿಫ್ಟಿ (NSE Nifty) ಕೂಡ 22 ಸಾವಿರ ಗಡಿಯನ್ನು ದಾಟಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 73,108.31 ಅಂಕಗಳ ಹೊಸ ಎತ್ತರವನ್ನು ಕಂಡಿತು. ನಿಫ್ಟಿ ಕೂಡ ತನ್ನ ಸಾರ್ವಕಾಲಿಕ 22,053.15 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿತು ಮತ್ತು 21,189 ಅಂಕಗಳಲ್ಲಿ ಅಂತ್ಯವಾಯಿತು. ವಿಪ್ರೋ (Wipro Shares) ಕಂಪನಿ ಷೇರುಗಳು ಹೆಚ್ಚಿನ ಲಾಭ ತಂದುಕೊಟ್ಟಿವೆ.
ವಹಿವಾಟಿನ ಆರಂಭಿಕ ಕೆಲವು ಗಂಟೆಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಭಾರೀ ಏರಿಕೆಯನ್ನು ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾಗುತ್ತಿರುವುದು ಈ ಏರಿಕೆಗೆ ಕಾರಣವಾಗಿದೆ. ವಿಶೇಷವಾಗಿ ಐಟಿ ಕಂಪನಿಗಳು ಹೆಚ್ಚಿನ ಕೊಡುಗೆಯನ್ನು ನೀಡುತ್ತಿವೆ. ಸೋಮವಾರ ಸೆನ್ಸೆಕ್ಸ್ ಭಾರೀ ಏರಿಕೆಗೆ ವಿಪ್ರೋ ಕಂಪನಿಗೆ ಹೆಚ್ಚಿನ ಕೊಡುಗೆ ನೀಡಿದ್ದು, ಶೇ.14ರಷ್ಟು ಏರಿಕೆಯನ್ನು ದಾಖಲಿಸಿದೆ.
ಶೇ.14ರಷ್ಟು ಏರಿಕೆಯನ್ನು ದಾಖಲಿಸಿದ್ದರಿಂದ ವಿಪ್ರೋ ಕಂಪನಿ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನದಲ್ಲಿ 18,168.68 ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿದ್ದೇ ಇದಕ್ಕೆ ಕಾರಣವಾಗಿದೆ. ಜನವರಿ 15ರ ಆರಂಭಿಕ ವಹಿವಾಟಿನಲ್ಲಿ ವಿಪ್ರೋ ಅತಿ ಹೆಚ್ಚು ಲಾಭ ಮಾಡಿಕೊಂಡ ಕಂಪನಿಯಾಗಿದೆ. ವಿಪ್ರೋ ಬಳಿಕ ಟೆಕ್ ಮಹೀಂದ್ರಾ, ಎಚ್‌ಡಿಎಫ್‌ಸಿ, ಎಸ್‌ಬಿಐ ಕೂಡ ಏರಿಕೆಯನ್ನು ಕಂಡಿವೆ.
ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಇನ್ಫೋಸಿಸ್‌ನಂತಹ ಷೇರುಗಳು ಸೋಮವಾರದಂದು ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಲು ಹೆಚ್ಚಿನ ಕೊಡುಗೆ ನೀಡಿವೆ, ಮುಖ್ಯವಾಗಿ ಈ ತಿಂಗಳು ಈ ಎಲ್ಲ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾಗಿವೆ.
ಈ ಸುದ್ದಿಯನ್ನೂ ಓದಿ: Stock Market: ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್! 200 ಪಾಯಿಂಟ್ ದಾಟಿದ ನಿಫ್ಟಿ