Site icon Vistara News

Stock Market Crash | ಜಾಗತಿಕ ಆರ್ಥಿಕ ಹಿಂಜರಿತ ಭೀತಿ, ಸೆನ್ಸೆಕ್ಸ್‌ 1,093 ಅಂಕ ಪತನ

sensex

ಮುಂಬಯಿ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿಗೆ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ಉಂಟಾಗಿದೆ. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 1,093 ಅಂಕಗಳ ಭಾರಿ ಕುಸಿತಕ್ಕೀಡಾಯಿತು. ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ.ಗೂ (Stock Market Crash) ಹೆಚ್ಚಿನ ನಷ್ಟ ಉಂಟಾಯಿತು.

ಬೆಳಗ್ಗೆ 11.10 ಕ್ಕೆ ಸೆನ್ಸೆಕ್ಸ್‌ 611 ಅಂಕ ನಷ್ಟದಲ್ಲಿ 59,307ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 17,685 ಅಂಕಗಳಲ್ಲಿ ವ್ಯವಹರಿಸುತ್ತಿತ್ತು. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ 285 ಲಕ್ಷ ಕೋಟಿ ರೂ.ಗಳಿಂದ 283 ಲಕ್ಷ ಕೋಟಿ ರೂ.ಗೆ ಇಳಿಯಿತು. ಅಂತಿಮವಾಗಿ ಸೆನ್ಸೆಕ್ಸ್‌ 58,840ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 346 ಅಂಕ ಕಳೆದುಕೊಂಡು 17,530ಕ್ಕೆ ಸ್ಥಿರವಾಯಿತು.

ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಿಸಿಎಸ್‌, ಐಸಿಐಸಿಐ ಬ್ಯಾಂಕ್‌ ಷೇರು ದರ ಇಳಿಯಿತು.

ಸೆನ್ಸೆಕ್ಸ್‌, ನಿಫ್ಟಿ ಕುಸಿತಕ್ಕೆ ಕಾರಣವೇನು? ಏಷ್ಯಾದ್ಯಂತ ನಿಕ್ಕಿ, ಕೋಸ್ಪಿ, ಹಾಂಗ್‌ಸೆಂಗ್‌ ಸೂಚ್ಯಂಕಗಳು ಕುಸಿಯಿತು. ಅಮೆರಿಕದಲ್ಲೂ ನಿನ್ನೆ ಷೇರು ಮಾರುಕಟ್ಟೆ ಚಟುವಟಿಕೆಗಳು ದುರ್ಬಲವಾಗಿತ್ತು. ಅಮೆರಿಕದಲ್ಲಿ ಮುಂದಿನ ವಾರ ಬಡ್ಡಿ ದರ ಏರಿಕೆಯ ಸಾಧ್ಯತೆ ಇದ್ದು, ಇದು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಸೃಷ್ಟಿಸಿದೆ. ವಿಶ್ವ ಬ್ಯಾಂಕ್‌ ತನ್ನ ವರದಿಯೊಂದರಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಸಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಶುಕ್ರವಾರ 79.82 ರೂ. ಮಟ್ಟದಲ್ಲಿ ಇಳಿದಿತ್ತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಇಳಿದಿತ್ತು.

ಐಟಿ, ಆಟೊಮೊಬೈಲ್‌, ಬ್ಯಾಂಕಿಂಗ್‌, ರಿಯಾಲ್ಟಿ ಷೇರುಗಳಿಗೆ ನಷ್ಟ:
ಐಟಿ, ವಾಹನೋಧ್ಯಮ, ಬ್ಯಾಂಕಿಂಗ್, ರಿಯಾಲ್ಟಿ, ಲೋಹ, ಮಾಧ್ಯಮ ಕ್ಷೇತ್ರದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕೆಲವು ದಿನಗಳಿಂದ ಮಾರಾಟದ ಒತ್ತಡ ಇದ್ದರೂ ಭಾರತದ ಷೇರುಪೇಟೆ ಕುಸಿತ ಕಂಡಿರಲಿಲ್ಲ, ಆದರೆ ಮುಂದಿನ ವಾರ ಅಮೇರಿಕಾದ ಫೆಡರಲ್ ರಿಸರ್ವ್ ಶೇ.1 ರಷ್ಟು ಬಡ್ಡಿದರ ಏರಿಸುವ ಸಾಧ್ಯತೆ ಇರುವ ಕಾರಣ, ಜಾಗತಿಕ ಷೇರುಪೇಟೆ ಇನ್ನೂ ಮಾರಾಟದ ಒತ್ತಡಕ್ಕೆ ಒಳಗಾಗುವ ಅಂಶಗಳು ಅಧಿಕ ಇರುವುದರಿಂದ ಹೂಡಿಕೆದಾರರು ಇಂದು ಷೇರುಗಳನ್ನು ಮಾರಿ, ಲಾಭಾಂಶ ನಗದೀಕರಣಕ್ಕೆ ಮುಂದಾದರು. ಸಪ್ಟೆಂಬರ್ 30 ರಂದು ಆರ್ ಬಿಐ ಸಹ 0.50% ಬಡ್ಡಿದರ ಏರಿಸುವ ಸಾಧ್ಯತೆ ಇದೆ.
ವಿದೇಶಿ ಹೂಡಿಕೆಯ ಹೊರ ಹರಿವು:
ಇಂದು ವಿದೇಶಿ ಹೂಡಿಕೆದಾರರು 3260 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಾಟ ಮಾಡಿದರು. 2021 ಅಕ್ಟೋಬರ್‌ನಿಂದ ಜುಲೈವರೆಗೆ 3.5 ಲಕ್ಷ ಕೋಟಿ ರೂ ಷೇರುಗಳನ್ನು ಮಾರಾಟ ಮಾಡಿದ್ದರು. ಆಗಸ್ಟ್ ನಂತರ ವಿದೇಶಿ ಹೂಡಿಕೆದಾರರು ಪುನಃ ಭಾರತದಲ್ಲಿ 50 ಸಾವಿರ ಕೋಟಿ ರೂ ಹೆಚ್ಚು ಹೂಡಿಕೆ ಮಾಡಿದ್ದರು, ಆದರೆ ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಭಾರಿ ಪ್ರಮಾಣದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಆರ್ಥಿಕ ಹಿಂಜರಿಕೆ ಭೀತಿ ಎಫೆಕ್ಟ್
ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿ ಹೆಚ್ಚಿರುವುದರಿಂದ ಅಮೇರಿಕಾ, ಯುರೋಪ್ ಸೇರಿಂದಂತೆ ಎಲ್ಲ ದೇಶಗಳ ಷೇರುಪೇಟೆಯಲ್ಲಿ ಭಾರಿ ಏರಿಳಿತ ಕಾಣುತ್ತಿದೆ. ಅಮೇರಿಕಾ, ಯುರೋಪ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಐಟಿ ಕಂಪನಿಗಳು ಆರ್ಥಿಕ ಹಿಂಜರಿಕೆ ಭೀತಿಯಿಂದ ಭಾರಿ ಇಳಿಕೆ ಕಾಣುತ್ತಿವೆ. ಈ ವರ್ಷದಲ್ಲೇ ಭಾರತದ ಐಟಿ ಸೂಚಂಕ್ಯ 30 ಕುಸಿತ ಕಂಡಿದ್ದು, ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್ 19%, ಇನ್ಫೋಸಿಸ್ 26% , ಹೆಚ್ಸಿಲ್ ಟೆಕ್ನಾಲಜೀಸ್ 31%, ಟೆಕ್ ಮಹಿಂದ್ರ್ 41%, ಮತ್ತು ವಿಪೋ 43% ಕುಸಿದಿವೆ. ಕಳೆದ ನಾಲ್ಕು ದಿನಗಳಲ್ಲಿ ಇನ್ಫೋಸಿಸ್ 54000 ಕೋಟಿ ಹಾಗೂ ಟಿಸಿಎಸ್ 76000 ಕೋಟಿ ರೂ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ.
ಹರ್ಷ ಇಂಜಿನಿಯರಿಂಗ್ ಐಪಿಒ
ಕೆಲವು ತಿಂಗಳ ಬಿಡುವಿನ ನಂತರ ಮತ್ತೆ ಷೇರುಪೇಟೆಯಲ್ಲಿ ಐಪಿಒಗಳ ಅಬ್ಬರ ಮರುಕಳಿಸಿದಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆ ಡ್ರೀಮ್ ಪೋಕ್ಸ್ ಕಂಪನಿಯ ಐಪಿಓ ಯಶಸ್ವಿಯಾಗಿದ್ದು ಇಂದು ಹರ್ಷ ಇಂಜನಿಯರಿಂಗ್ ಇಂಟರ್‌ ನ್ಯಾಷನಲ್ ಕಂಪನಿಯ ಐಪಿಒಗೆ ಬಾರಿ ಸ್ಪಂದನೆ ಸಿಕ್ಕಿದೆ. ಮೊದಲನೇ ದಿನವೇ ಪೂರೈಕೆಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿತು. ಕೊನೆಯ ದಿನದ ಅಂತ್ಯಕ್ಕೆ 74 ಪಟ್ಟು ಹೆಚ್ಚು ಷೇರುಗಳಿಗೆ ಬೇಡಿಕೆ ಪಡೆದುಕೊಂಡಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಈ ಷೇರಿಗೆ 235 ರೂ ಜಿಎಂಪಿ ಇದ್ದು ಐಪಿಒ ಬೆಲೆಗಿಂತ 50% ಹೆಚ್ಚು ಬೆಲೆಯಲ್ಲಿ ವಹಿವಾಟು ಆರಂಭಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಕಂಡ ಯಶಸ್ವಿ ಐಪಿಒಗಳಲ್ಲಿ ಒಂದಾಗಿದ್ದು ಮತ್ತೆ ಷೇರುಪೇಟೆಯಲ್ಲಿ ಐಪಿಓ ಅಬ್ಬರ ಕಂಡುಬರುವ ಸೂಚನೆ ಇದಾಗಿದೆ ಎಂದು ತಜ್ಱರು ಅಂದಾಜಿಸಿದ್ದಾರೆ.
ವೇದಾಂತ ಅವಾಂತರ:
ವಾಲ್ಕನ್ ಸಹಭಾಗಿತ್ವದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಗುಜರಾತ್‌ನಲ್ಲಿ ಪ್ರಾರಂಭಿಸಲಾಗುವುದು ಎಂಬ ಪ್ರವರ್ತಕರ ಘೋಷಣೆಯೊಂದಿಗೆ ಭಾರಿ ಏರಿಕೆ ಕಂಡಿದ್ದ ವೇದಾಂತ ಕಂಪನಿಯು ನಿನ್ನೆ ಸೆಬಿಗೆ ನೀಡಿದ ಸ್ಪಷ್ಟನೆಯಲ್ಲಿ ವೇದಾಂತ ಕಂಪನಿಯು ಉತ್ಪಾದನೆಯನ್ನು ಬೇರೆ ಕಂಪನಿಯ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿರುವುದರಿಂದ ಇಂದು ಕಂಪನಿಯ ಷೇರುಗಳು ಭಾರಿ ಇಳಿಕೆ ಕಂಡಿದೆ.
ಫೆಡ್ ಎಕ್ಸ್ ವರದಿ : ಎಚ್ಚರಿಕೆ ಸಂದೇಶ
ಅಮೇರಿಕಾದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಫೆಡ್ ಎಕ್ಸ್ ಕಂಪನಿಯು ಮುಂದಿನ ಒಂದು ವರ್ಷ ಕಂಪನಿಯು ಲಾಭಾಂಶ ಗಳಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಿಕೆ ಬಿಡುಗಡೆ ಮಾಡಿರುವುದರಿಂದ ಷೇರು ಇಳಿಕೆ ಕಂಡಿದೆ. ಇದು ಅಮೇರಿಕ ಆರ್ಥಿಕ ಹಿಂಜರಿಕೆ ಅಂಚಿನಲ್ಲಿದೆ ಎಂಬುದನ್ನು ತೋರಿಸುತ್ತಿದೆ ಆದರೆ ಅಲ್ಲಿನ ಸರ್ಕಾರ ಅಧಿಕೃತವಾಗಿ ಒಪ್ಪೊಕೊಳ್ಳುತ್ತಿಲ್ಲ ಎಂದು ತಜ್ಱರು ವಿಶ್ಲೇಶಿಸಿದ್ದಾರೆ. ಈ ಕಂಪನಿಯು ಕೇವಲ ಮೂರು ತಿಂಗಳ ಹಿಂದೆ ಉತ್ತಮ ಬೆಳವಣಿಗೆಯ ವರದಿ ನೀಡಿತ್ತು.
ಪೌಂಡ್ ಕುಸಿತ
ಅಮೇರಿಕಾದ ಕರೆನ್ಸಿ ಡಾಲರ್ ಎದುರು ಬ್ರಿಟನ್‌ನ ಕರೆನ್ಸಿ ಪೌಂಡ್ 37 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಇಂದಿನ ವಹಿವಾಟಿನಲ್ಲಿ ಡಾಲರ್ ಎದುರು 1% ಇಳಿಕೆ ಕಂಡು 1.1351 ನಲ್ಲಿ ವಹಿವಾಟು ನಡೆಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ದೇಶಗಳ ಕರೆನ್ಸಿ ಭಾರಿ ಕುಸಿತ ಕಾಣುತ್ತಿದ್ದು ಆ ದೇಶಗಳ ಕೇಂದ್ರ ಬ್ಯಾಂಕ್‌ಗಳು ಮತ್ತು ಸರ್ಕಾರಗಳ ಮೇಲೆ ಭಾರಿ ಒತ್ತಡ ಬೀರುತ್ತಿವೆ. ಆರ್ಥಿಕ ಹಿಂಜರಿಕೆಯಾದರೆ ಪರಿಸ್ಥಿತಿ ಇನ್ನು ಕಳಾಹೀನವಾಗುವ ಸಾಧ್ಯತೆಗಳಿವೆ.

Exit mobile version