ಮುಂಬೈ: ಕೇಂದ್ರ ಬಜೆಟ್ (Union Budget 2024) ಮಂಡಿಸಿದ ದಿನವಾದ ಜುಲೈ 23 ಸೇರಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿದೆ. ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿದೆ.
ಬಿಎಸ್‌ಇ ಸೆನ್ಸೆಕ್ಸ್ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್ ತಲುಪಿದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್ ತಲುಪಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದರು.
ಲಾಭ ಗಳಿಸಿದ ಕಂಪನಿಗಳು
ಭಾರ್ತಿ ಏರ್‌ಟೆಲ್ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿದೆ. ಭಾರ್ತಿ ಏರ್‌ಟೆಲ್ ಲಾಭದ ಪ್ರಮಾಣವು ಶೇ.4.51ರಷ್ಟು ಏರಿಕೆಯಾಗಿದೆ. ಇದರ ಜತೆಗೆ ಅದಾನಿ ಪೋರ್ಟ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿದವು.
ನಷ್ಟ ಅನುಭವಿಸಿದ ಕಂಪನಿಗಳು
ನೆಸ್ಲೆ ಕಂಪನಿಯು ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಇದರ ಷೇರುಗಳ ಮೌಲ್ಯವು ಶೇ.0.07ರಷ್ಟು ಕುಸಿದಿದೆ. ಒಎನ್‌ಜಿಸಿ, ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿದವು. ಇನ್ನು ಬಜೆಟ್ ಹಿಂದಿನ ದಿನ, ಬಜೆಟ್ ಹಾಗೂ ಬಜೆಟ್ ನಂತರದ ಕೆಲ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಏರಿಳಿತ ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ನಾಲ್ಕು ದಿನಗಳಿಂದ ಇಳಿಕೆಯಾಗಿದ್ದ ಷೇರು ಪೇಟೆಯು ಶುಕ್ರವಾರ ಏರಿಕೆ ಕಂಡಿದೆ ಎಂದು ಹೂಡಿಕೆ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕ ಇಳಿಕೆ; ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ? ತಜ್ಞರು ಹೇಳೋದಿಷ್ಟು