ಮುಂಬೈ: ಬಾಂಬೆ ಷೇರು ಪೇಟೆ (Stock Market)ಯಲ್ಲಿ ಗೂಳಿ ನೆಗೆತ ಮುಂದುವರಿದಿದೆ. ಕೆಲವು ದಿನಗಳ ಹಿಂದೆ ಐತಿಹಾಸಿಕ 79,000 ಅಂಕ ತಲುಪಿದ್ದ ಸೆನ್ಸೆಕ್ಸ್ (Sensex) ಇಂದು (ಜುಲೈ 2) ಕೂಡ ಮೇಲ್ಮುಖವಾಗಿ ಸಾಗಿದೆ. ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್ ದಾಖಲೆಯ 79,653.21 ಅಂಕ ತಲುಪಿದೆ. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್ ಗಡಿ ಮುಟ್ಟಿದೆ.
ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್ ಗಳಿಸಿದೆ. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಇಂದು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಇಂದು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿವೆ. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.
ಈ ಮಧ್ಯೆ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 12 ಪೈಸೆ ದುರ್ಬಲಗೊಂಡು 83.56ಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಬಲವಾದ ಯುಎಸ್ ಡಾಲರ್ ಮತ್ತು ಹೆಚ್ಚಾದ ಕಚ್ಚಾ ತೈಲ ಬೆಲೆಗಳು ಇದಕ್ಕೆ ಕಾರಣ. ತೈಲ ಆಮದುದಾರರು ಮತ್ತು ವಿದೇಶಿ ಹೂಡಿಕೆದಾರರು ಯುಎಸ್ ಡಾಲರ್ ಹೆಚ್ಚಾಗಿ ಬಳಸುತ್ತಿದ್ದು, ಇದು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ವಿವರಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 83.51 ಮೌಲ್ಯದೊಂದಿಗೆ ದಿನವನ್ನು ಆರಂಭಿಸಿತು. ಆದರೆ ಬಳಿಕ ಡಾಲರ್ ವಿರುದ್ಧ 83.56ಕ್ಕೆ ಇಳಿಯಿತು. ಈ ಮೂಲಕ ಸೋಮವಾರಕ್ಕಿಂತ 12 ಪೈಸೆ ಕುಸಿತ ದಾಖಲಿಸಿದೆ.
ಗುರುವಾರ (ಜೂನ್ 27)ದ ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ ಬೆಂಚ್ ಮಾರ್ಕ್ ಸೂಚ್ಯಂಕಗಳು ಜಿಗಿದುಕೊಂಡಿದ್ದವು. ಅಂದು ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 79,000 ಗಡಿಯನ್ನು ದಾಟಿತ್ತು ಮತ್ತು ನಿಫ್ಟಿ ಬ್ಲೂ-ಚಿಪ್ ಷೇರುಗಳ ಖರೀದಿಯ ಮಧ್ಯೆ ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ರಿಲಯನ್ಸ್ ಇಂಡಸ್ಟ್ರೀಸ್‌ನ ಬ್ಲೂ-ಚಿಪ್ ಮತ್ತು ಐಸಿಐಸಿಐಯ ಷೇರು ಖರೀದಿಯೊಂದಿಗೆ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 339.51 ಪಾಯಿಂಟ್ಸ್ ಏರಿಕೆ ಕಂಡು 79,013.76ಕ್ಕೆ ತಲುಪಿದ್ದರೆ ಅದೇ ರೀತಿ ನಿಫ್ಟಿ ಕೂಡ 97.6 ಪಾಯಿಂಟ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 23,966.40ಕ್ಕೆ ಮುಟ್ಟಿತ್ತು. “ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಸೆನ್ಸೆಕ್ಸ್ ಅನ್ನು 80,000 ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಮತ್ತು ಟೆಲಿಕಾಂನಂತಹ ಕ್ಷೇತ್ರಗಳಲ್ಲಿ ಬಲವಾದ ಲಾರ್ಜ್ ಕ್ಯಾಪ್‌ಗಳು ಈಗ ಏರಿಕೆ ಪ್ರವೃತ್ತಿಯನ್ನು ಮುನ್ನಡೆಸುತ್ತಿವೆ” ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ