Site icon Vistara News

Stock Market: ಷೇರುಪೇಟೆಯಲ್ಲಿ ಗೂಳಿ ಜಿಗಿತ; ಮೊದಲ ಬಾರಿ 82,000 ಗಡಿ ದಾಟಿದ ಸೆನ್ಸೆಕ್ಸ್

Stock Market

ಮುಂಬೈ: ತಿಂಗಳ ಆರಂಭದಲ್ಲಿಯೇ ಹೂಡಿಕೆದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ (Stock Market). ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 82,000 ಗಡಿಯನ್ನು ದಾಟಿದ್ದು, ನಿಫ್ಟಿ 50 ಸೂಚ್ಯಂಕವು 25,000 ಗಡಿದಾಟಿ ಮುಂದುವರಿದಿದೆ.

ಗುರುವಾರ ಬಿಎಸ್ಇ ಸೆನ್ಸೆಕ್ಸ್ ಶೇ. 0.47 ಅಥವಾ 388 ಪಾಯಿಂಟ್ಸ್ ಏರಿಕೆ ಕಂಡು ಮೊದಲ ಬಾರಿಗೆ 82,000 ಗಡಿ ದಾಟಿದೆ. ಹೊಸ ದಾಖಲೆಯ ಗರಿಷ್ಠ ಮಟ್ಟವು 82,129.49 ಅಂಕದಲ್ಲಿದೆ. ಮತ್ತೊಂದೆಡೆ ನಿಫ್ಟಿ 50 ಶೇ. 0.50 ಅಥವಾ 127 ಪಾಯಿಂಟ್ ಏರಿಕೆ ಕಂಡು ಮೊದಲ ಬಾರಿಗೆ 25,000 ಗಡಿ ದಾಟಿದೆ. ಹೊಸ ದಾಖಲೆಯ ಗರಿಷ್ಠ 25,078.30 ಮಟ್ಟದಲ್ಲಿದೆ. ನಿಫ್ಟಿ ಸ್ಮಾಲ್ ಕ್ಯಾಪ್ ಶೇಕಡಾ 0.44ರಷ್ಟು ಏರಿಕೆ ಕಂಡರೆ, ಮಿಡ್ ಕ್ಯಾಪ್ ಶೇಕಡಾ 0.35ರಷ್ಟು ಹೆಚ್ಚಳ ದಾಖಲಿಸಿದೆ. ವಲಯವಾರು ನಿಫ್ಟಿ ಮೆಟಲ್ ಶೇ. 1.55ರಷ್ಟು ಏರಿಕೆ ಕಂಡರೆ, ತೈಲ ಮತ್ತು ಅನಿಲ ಶೇ. 0.64ರಷ್ಟು ಹೆಚ್ಚಾಗಿದೆ.

ನಿಫ್ಟಿ ಕೇವಲ 23 ದಿನಗಳಲ್ಲಿ 1,000 ಪಾಯಿಂಟ್ ಜಿಗಿತ ದಾಖಲಿಸಿದ್ದು ವಿಶೇಷ. ಅಂದರೆ 23,000ದಿಂದ 24,000ಕ್ಕೆ ತಲುಪಲು 23 ದಿನಗಳು ಸಾಕಾಯ್ತು. ಇದು ಎರಡನೇ ವೇಗದ ಹೆಚ್ಚಳ ಎನಿಸಿಕೊಂಡಿದೆ. ಇದಕ್ಕೂ ಮೊದಲು 2021ರಲ್ಲಿ ಸೆನ್ಸೆಕ್ಸ್‌ 19 ವಹಿವಾಟು ಅವಧಿಗಳಲ್ಲಿ 16,000ದಿಂದ 17,000ಕ್ಕೆ ಏರಿಕೆ ಕಂಡಿತ್ತು.

ಮಾರುತಿ ಸುಜುಕಿ, ಕೋಲ್ ಇಂಡಿಯಾ, ಹಿಂಡಾಲ್ಕೊ, ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಪವರ್ ಗ್ರಿಡ್ ನಿಫ್ಟಿ 50ನಲ್ಲಿ ಲಾಭ ಗಳಿಸಿದ ಷೇರುಗಳಾಗಿವೆ. ಇನ್ನು ಎಂ & ಎಂ, ಬಿಪಿಸಿಎಲ್, ಹೀರೋ ಮೋಟೊಕಾರ್ಪ್, ಸನ್ ಫಾರ್ಮಾ ಮತ್ತು ಐಷರ್ ಮೋಟಾರ್ಸ್ ನಷ್ಟ ಅನುಭವಿಸಿದವು. ಮಾರುತಿ ಸುಜುಕಿ ಕಂಪನಿಯ ಲಾಭದಲ್ಲಿ ಶೇ. 47ರಷ್ಟು ಏರಿಕೆಯಾಗಿ 3,650 ಕೋಟಿ ರೂ.ಗೆ ತಲುಪಿದೆ ಎಂಬ ವರದಿ ಪ್ರಕಟಗೊಂಡ ಬಳಿಕ ಷೇರುಗಳು ಏರಿಕೆ ಕಂಡವು. ಕಳೆದ ವರ್ಷ ಇದೇ ಅವಧಿಯಲ್ಲಿ ತೆರಿಗೆ ನಂತರದ ಲಾಭ 2,485.1 ಕೋಟಿ ರೂ. ಆಗಿತ್ತು.

ಬಿಎಸ್ಇ-ಲಿಸ್ಟೆಡ್‌ ಸಂಸ್ಥೆಗಳ ಮಾರುಕಟ್ಟೆ ಕ್ಯಾಪ್ ಹೂಡಿಕೆದಾರರು 1.62 ಲಕ್ಷ ಕೋಟಿ ರೂ.ಗಳಿಂದ ಲಾಭ ಗಳಿಸಿದ್ದಾರೆ. ಹೂಡಿಕೆದಾರರು ಬುಧವಾರ 462.38 ಲಕ್ಷ ಕೋಟಿ ರೂ.ಗಳಿದ್ದರೆ ಇಂದು ಅದು 464 ಲಕ್ಷ ಕೋಟಿ ರೂ.ಗೆ ಏರಿದೆ. ಸೆಪ್ಟೆಂಬರ್‌ನಲ್ಲಿ ಸಂಭವನೀಯ ದರ ಕಡಿತದ ಬಗ್ಗೆ ಫೆಡ್ ಮುಖ್ಯಸ್ಥರು ಸೂಚಿಸಿರುವುದು ಜಾಗತಿಕ ಈಕ್ವಿಟಿ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ ಎಂದು ಆರ್ಥಿಕ ತಜ್ಞ ಡಾ.ವಿ.ಕೆ.ವಿಜಯಕುಮಾರ್ ತಿಳಿಸಿದ್ದಾರೆ. ಏಷ್ಯಾದ ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಗಳು ನಷ್ಟದಲ್ಲಿವೆ.

ಇದನ್ನೂ ಓದಿ: Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

ಬುಧವಾರ ಸೆನ್ಸೆಕ್ಸ್ 285 ಅಂಕಗಳ ಏರಿಕೆಯೊಂದಿಗೆ 81,741ಕ್ಕೆ ಕೊನೆಗೊಂಡರೆ, ನಿಫ್ಟಿ 94 ಅಂಕಗಳ ಏರಿಕೆಯೊಂದಿಗೆ 24,951ಕ್ಕೆ ವಹಿವಾಟು ಕೊನೆಗೊಳಿಸಿತ್ತು.

Exit mobile version