Site icon Vistara News

Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Stock Market

ಮುಂಬೈ: ಭಾರತೀಯ ಷೇರುಪೇಟೆ (Stock Market)ಯಲ್ಲಿ ಸೋಮವಾರ (ಆಗಸ್ಟ್‌ 5) ಭಾರಿ ಕುಸಿತ ಕಂಡು ಬಂದಿದೆ. ಬಿಎಸ್‌ಇ ಸೆನ್ಸೆಕ್ಸ್ (Sensex) ಮತ್ತು ಎನ್‌ಎಸ್‌ಇ ನಿಫ್ಟಿ (Nifty) ಶೇ. 2ಕ್ಕೂ ಅಧಿಕ ನೆಲಕಚ್ಚಿದೆ. ಬಿಎಸ್‌ಇ ಸೆನ್ಸೆಕ್ಸ್ 2,393 ಪಾಯಿಂಟ್ಸ್ ಕುಸಿದು 78,588ಕ್ಕೆ ತಲುಪಿದರೆ, ನಿಫ್ಟಿ 50 ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 405 ಪಾಯಿಂಟ್ಸ್ ಕುಸಿದು 24,302 ಮಟ್ಟಕ್ಕೆ ಬಂದು ಮುಟ್ಟಿದೆ. ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಸುಮಾರು 442 ಷೇರುಗಳ ಮೌಲ್ಯ ವೃದ್ಧಿಸಿದರೆ, 2,368 ಷೇರುಗಳು ಕುಸಿದವು ಮತ್ತು 154 ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ನಿಫ್ಟಿಯಲ್ಲಿ ಅಪೊಲೊ ಆಸ್ಪತ್ರೆ ಮತ್ತು ಸನ್ ಫಾರ್ಮಾ ಲಾಭ ಗಳಿಸಿದ ಪ್ರಮುಖ ಕಂಪನಿಗಳು. ಇನ್ನು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಟೈಟಾನ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿದವು.

ಕುಸಿತಕ್ಕೆ ಕಾರಣವೇನು?

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ: ಕಳೆದ ವಹಿವಾಟಿನ ದಿನದಂದು ಅಮೆರಿಕದ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ. ಅದರ ಪರಿಣಾಮ ಇಂದು ಜಗತ್ತಿನ ಎಲ್ಲ ಮಾರುಕಟ್ಟೆಗಳಲ್ಲೂ ಗೋಚರಿಸುತ್ತಿದೆ. ಇನ್ನು ಅಮೆರಿಕದ ಆರ್ಥಿಕತೆಯು ಆರ್ಥಿಕ ಹಿಂಜರಿತದ ಹಂತವನ್ನು ಪ್ರವೇಶಿಸಬಹುದು ಎಂಬ ಆತಂಕಗಳಿವೆ. ಕಳೆದ ವರ್ಷದ ಮಾಸಿಕ ಸರಾಸರಿ ಉದ್ಯೋಗಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಜುಲೈನಲ್ಲಿ ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿದೆ. ಜತೆಗೆ ನಿರುದ್ಯೋಗ ಪ್ರಮಾಣ ಶೇ. 4.3ಕ್ಕೆ ಏರಿದೆ. ಇದು 2021ರ ಅಕ್ಟೋಬರ್ ನಂತರ ದಾಖಲಾದ ಗರಿಷ್ಠ ಮಟ್ಟ.

ಬ್ಯಾಂಕ್ ಆಫ್ ಜಪಾನ್‌ನ ಬದಲಾದ ನಿಯಮ: ಬ್ಯಾಂಕ್ ಆಫ್ ಜಪಾನ್ ತನ್ನ ಬೆಂಚ್ ಮಾರ್ಕ್ ಬಡ್ಡಿದರವನ್ನು ಹೆಚ್ಚಿಸಿದೆ. ಇದರಿಂದ ಜಪಾನ್‌ನ ನಿಕೈ 225 ಸೂಚ್ಯಂಕವು ಅಮೆರಿಕನ್‌ ಡಾಲರ್ ವಿರುದ್ಧ ಜಪಾನಿನ ಯೆನ್ ಮೌಲ್ಯವನ್ನು ಹೆಚ್ಚಿಸಿದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಭೀತಿ: ಇದು ಜಾಗತಿಕ ಮಾರುಕಟ್ಟೆಯಲ್ಲಿ ನಕಾರಾತ್ಮಕ ಭಾವನೆಯನ್ನು ಸೃಷ್ಟಿಸಿದೆ. ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲೂ ಕಂಡು ಬಂದಿದೆ. ಹಮಾಸ್ ಮುಖ್ಯಸ್ಥ ಮತ್ತು ಹಿಜ್ಬುಲ್ಲಾ ಮಿಲಿಟರಿ ಮುಖ್ಯಸ್ಥನ ಹತ್ಯೆಗೆ ಇಸ್ರೇಲ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್, ಹಮಾಸ್ ಮತ್ತು ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದು ತೈಲ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಬಹುದು.

ಭಾರತ ಮಾತ್ರವಲ್ಲ ಏಷ್ಯನ್ ಮಾರುಕಟ್ಟೆಯಲ್ಲಿ ಇಂದು ಕುಸಿತ ಕಂಡುಬಂದಿದೆ. ಜಪಾನ್‌ನ ನಿಕ್ಕಿ ಶೇ. 4.63 ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.58ರಷ್ಟು ಕುಸಿದಿವೆ. ಚೀನಾದ ಶಾಂಘೈ ಕಾಂಪೋಸಿಟ್ ಕೂಡ ಶೇ. 0.22ರಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ಆಗಸ್ಟ್‌ 1ರಂದು ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದವು. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಮೊದಲ ಬಾರಿಗೆ 82,000 ಗಡಿಯನ್ನು ದಾಟಿದ್ದು, ನಿಫ್ಟಿ 50 ಸೂಚ್ಯಂಕವು 25,000 ಗಡಿದಾಟಿ ಮುಂದುವರಿದಿತ್ತು. ಆಗಸ್ಟ್‌ 2ರಂದು ಕುಸಿತ ಕಂಡು ಬಂದಿತ್ತು.

Exit mobile version