ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗುರುವಾರ ತನ್ನ ಹಣಕಾಸು ನೀತಿ ಪರಾಮರ್ಶೆ ಕುರಿತ ನಿರ್ಧಾರವನ್ನು ಪ್ರಕಟಿಸಲಿದೆ. ಮತ್ತೊಮ್ಮೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿಡುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಬುಧವಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ (Stock Market) ಈ ವರ್ಷ ಮೊಟ್ಟ ಮೊದಲ ಬಾರಿಗೆ 63,000 ಅಂಕಗಳಿಗೂ ಮೇಲ್ಪಟ್ಟು ದಿನದ ವಹಿವಾಟು ಮುಕ್ತಾಯಗೊಳಿಸಿದೆ. (Sensex ends above 63K) ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರು ದರದಲ್ಲಿ ಏರಿಕೆ ದಾಖಲಾಯಿತು.
ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 350 ಅಂಕ ಏರಿಕೆಯಾಗಿ 63,142 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 127 ಅಂಕ ಜಿಗಿದು 18,726ಕ್ಕೆ ಸ್ಥಿರವಾಯಿತು. ನೆಸ್ಲೆ, ಟಾಟಾ ಸ್ಟೀಲ್, ಟಾಟಾ ಮೋಟಾರ್ ಷೇರು ದರ ಲಾಭ ಗಳಿಸಿತು. ಕೋಟಕ್ ಬ್ಯಾಂಕ್, ಮಾರುತಿ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಷೇರು ದರ ನಷ್ಟಕ್ಕೀಡಾಯಿತು. ಬಿಎಸ್‌ಇನಲ್ಲಿ ನೋಂದಾಯಿತ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 2.46 ಲಕ್ಷ ಕೋಟಿ ರೂ. ಏರಿದ್ದು, 265 ಲಕ್ಷ ಕೋಟಿ ರೂ.ಗೆ ಏರಿತು.
ಆರ್‌ಬಿಐ ಪರಾಮರ್ಶೆ ಸಭೆಗೆ ಮುನ್ನ ಸೆನ್ಸೆಕ್ಸ್ ಜಿಗಿತ: ಆರ್‌ಬಿಐ ಹಣಕಾಸು ನೀತಿ ಸಭೆಗೆ ಮುನ್ನ ಸೆನ್ಸೆಕ್ಸ್ ಏರಿಕೆಯಾಗಿರುವುದು ಹೂಡಿಕೆದಾರರ ಸಕಾರಾತ್ಮಕ ಮನೋಭಾವವನ್ನು ಬಿಂಬಿಸಿದೆ. ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ವಿಶ್ವಾಸ ಹೂಡಿಕೆದಾರರಲ್ಲಿ ಇದೆ ಎಂದು ತಜ್ಞರು ಹೇಳಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಗುರುವಾರ ಚೇತರಿಸಿದ್ದು, 82.54 ರೂ.ಗೆ ಚೇತರಿಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಗುರುವಾರ ಅಲ್ಪ ಇಳಿಕೆಯಾಗಿದೆ. ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಬ್ಯಾರಲ್‌ಗೆ 75 ಡಾಲರ್‌ಗೆ ತಗ್ಗಿದೆ.
ಎಕ್ಸಿಸ್ ಬ್ಯಾಂಕ್ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಗುರುವಾರ 3 ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ. ಬ್ಯಾಂಕ್‌ನ ಷೇರು ದರ ಕೂಡ 981 ರೂ.ಗೆ ಏರಿತು. ಎಕ್ಸಿಸ್ ಬ್ಯಾಂಕ್ ಷೇರು ದರ ಕಳೆದ ಮೂರು ವರ್ಷದಲ್ಲಿ 142% ಏರಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, 16.78 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿದೆ. ಟಿಸಿಎಸ್ 11.83 ಲಕ್ಷ ಕೋಟಿ ರೂ, ಎಚ್‌ಡಿಎಫ್‌ಸಿ ಬ್ಯಾಂಕ್ 8.9 ಲಕ್ಷ ಕೋಟಿ ರೂ, ಐಸಿಐಸಿಐ ಬ್ಯಾಂಕ್ 6.68 ಲಕ್ಷ ಕೋಟಿ ರೂ, ಎಚ್‌ಯುಎಲ್ 6.32 ಲಕ್ಷ ಕೋಟಿ ರೂ, ಐಟಿಸಿ 5.50 ಲಕ್ಷ ಕೋಟಿ ರೂ, ಇನ್ಫೋಸಿಸ್ 5.30 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿದೆ.
ಕಂಪನಿ | ಮಾರುಕಟ್ಟೆ ಮೌಲ್ಯ |
ರಿಲಯನ್ಸ್ ಇಂಡಸ್ಟ್ರೀಸ್ | 16.78 ಲಕ್ಷ ಕೋಟಿ ರೂ. |
ಟಿಸಿಎಸ್ | 11.83 ಲಕ್ಷ ಕೋಟಿ ರೂ. |
ಎಚ್‌ಡಿಎಫ್‌ಸಿ ಬ್ಯಾಂಕ್ | 8.94 ಲಕ್ಷ ಕೋಟಿ ರೂ. |
ಐಸಿಐಸಿಐ ಬ್ಯಾಂಕ್ | 6.58 ಲಕ್ಷ ಕೋಟಿ ರೂ. |
ಎಚ್‌ಯುಎಲ್ | 6.32 ಲಕ್ಷ ಕೋಟಿ ರೂ. |
ಇದನ್ನೂ ಓದಿ: BSNL Revival: ಬಿಎಸ್ಸೆನ್ನೆಲ್ ಹಳಿಗೆ ತರಲು ಕೇಂದ್ರದಿಂದ 89 ಸಾವಿರ ಕೋಟಿ ರೂ. ಪ್ಯಾಕೇಜ್, ಸಿಗಲಿದೆಯೇ 5ಜಿ?