Site icon Vistara News

Stock market : ಸೆನ್ಸೆಕ್ಸ್‌ ಸತತ ಎರಡನೇ ದಿನಕ್ಕೆ ಕುಸಿತ, ಹೂಡಿಕೆದಾರರಿಗೆ 90,000 ಕೋಟಿ ರೂ. ನಷ್ಟ

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸನ್ಸೆಕ್ಸ್‌ ಸತತ ಎರಡನೇ ದಿನಕ್ಕೆ ಇಳಿಕೆ ದಾಖಲಿಸಿದೆ. (stock market) ಇದರ ಪರಿಣಾಮ ಹೂಡಿಕೆದಾರರಿಗೆ 90,000 ಕೋಟಿ ರೂ. ನಷ್ಟವಾಗಿದೆ. ಅಂದರೆ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಕುಸಿತ ದಾಖಲಾಗಿದೆ.

ಸೆನ್ಸೆಕ್ಸ್‌ ಬುಧವಾರ 371 ಅಂಕ ಕಳೆದುಕೊಂಡು 61,560ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 104 ಅಂಕ ಕಳೆದುಕೊಂಡು 18,181ಕ್ಕೆ ವಹಿವಾಟು ಕೊನೆಗೊಳಿಸಿತು. ಐಟಿ, ಟೆಕ್‌, ಲೋಹ, ತೈಲ ಮತ್ತು ಅನಿಲ ವಲಯದ ಷೇರು ದರ ಇಳಿಯಿತು.

ಇದನ್ನೂ ಓದಿ: Stock market today : ಸೆನ್ಸೆಕ್ಸ್‌ ಜಿಗಿತ, ಹೂಡಿಕೆದಾರರಿಗೆ 2.66 ಲಕ್ಷ ಕೋಟಿ ರೂ. ಲಾಭ

ರಷ್ಯಾದಿಂದ ಕಚ್ಚಾ ತೈಲ ಆಮದು ಹೆಚ್ಚಳ:

ರಷ್ಯಾದಿಂದ ಭಾರತದ ಕಚ್ಚಾ ತೈಲ ಖರೀದಿಯ ಆಮದು ಕಳೆದ ಏಪ್ರಿಲ್‌ನಲ್ಲಿ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. (Russian oil import ) ಮಧ್ಯಪ್ರಾಚ್ಯ ಮೂಲದ ಹಾಗೂ ಆಫ್ರಿಕನ್‌ ಗ್ರೇಡ್‌ ಕಚ್ಚಾ ತೈಲದ ಆಮದು ಕಳೆದ 22 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಭಾರತ ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿದೆ.

ಭಾರತವು ಕಳೆದ ಏಪ್ರಿಲ್‌ನಲ್ಲಿ ರಷ್ಯಾದಿಂದ ದಿನಕ್ಕೆ ಸರಾಸರಿ 19 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಆಮದು ಮಾಡಿದೆ. ಮಾರ್ಚ್‌ಗೆ ಹೋಲಿಸಿದರೆ ಇದು 4.4% ಹೆಚ್ಚು.. ಇದು ಭಾರತ ಒಟ್ಟಾರೆ ಖರೀದಿಸುವ ತೈಲದಲ್ಲಿ ಐದನೇ ಎರಡರಷ್ಟು ಪಾಲು ಆಗಿದೆ.

ರಷ್ಯಾದಿಂದ ದಾಖಲೆಯ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡುವುದರಿಂದ ಭಾರತದ ತೈಲ ಸಂಸ್ಕರಣಾ ಘಟಕಗಳಿಗೆ ಅನುಕೂಲವಾಗಿದೆ. ಡೀಸೆಲ್‌ ಮತ್ತು ಜೆಟ್‌ ಇಂಧನವನ್ನು ಯುರೋಪಿಗೆ ರಫ್ತು ಮಾಡಲು ಅನುಕೂಲವಾಗುತ್ತಿದೆ. ಇದು ತೈಲ ಸಂಸ್ಕರಣೆ ಕಂಪನಿಗಳಿಗೆ ಲಭದಾಯಕವಾಗಿ ಪರಿಣಮಿಸಿದೆ.

ಉಕ್ರೇನ್-ರಷ್ಯಾ ಸಂಘರ್ಷದ ಬಳಿಕ ಯುರೋಪ್-ರಷ್ಯಾ ಸಂಬಂಧ ಬಿಗಡಾಯಿಸಿತ್ತು. ರಷ್ಯಾದಿಂದ ತೈಲ ಖರೀದಿಯನ್ನು ಯುರೋಪ್‌ ಕಡಿಮೆ ಮಾಡಿತ್ತು. ಮತ್ತೊಂದು ಕಡೆ ಭಾರತಕ್ಕೆ ರಷ್ಯಾದ ಡಿಸ್ಕೌಂಟ್‌ ದರದ ತೈಲ ದೊರೆಯಿತು. ಇದನ್ನು ಸಂಸ್ಕರಿಸಿದ ಕಂಪನಿಗಳು ಯುರೋಪಿಗೆ ಮಾರುತ್ತಿವೆ.

Exit mobile version