ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 629 ಅಂಕ ಜಿಗಿದಿದ್ದು, 62,501 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. (Stock market) ನಿಫ್ಟಿ 178 ಅಂಕ ಏರಿಕೊಂಡು 18,499ಕ್ಕೆ ವೃದ್ಧಿಸಿದೆ. ನಿಫ್ಟಿ ಈ ವರ್ಷ ಮೊದಲ ಬಾರಿಗೆ 18,500 ಅಂಕಗಳಿಗೆ ವೃದ್ಧಿಸಿತು. ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ 2.24 ಲಕ್ಷ ಕೋಟಿ ರೂ. ಏರಿದ್ದು, 282 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹಾಗಾದರೆ ಸೂಚ್ಯಂಕಗಳ ಜಿಗಿತಕ್ಕೆ ಕಾರಣವೇನು?
ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಎಚ್‌ಯುಎಲ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೊ ಷೇರು ದರ ಜಿಗಿಯಿತು. ಇದು ಸೂಚ್ಯಂಕ ಜಿಗಿತಕ್ಕೆ ಕಾರಣಗಳಲ್ಲೊಂದು. ಮತ್ತೊಂದು ಕಡೆ ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಎನ್‌ಟಿಪಿಸಿ ಷೇರು ದರ ಇಳಿಯಿತು.
ಮಾಹಿತಿ ತಂತ್ರಜ್ಞಾನ, ಎಫ್‌ಎಂಸಿಜಿ, ಬ್ಯಾಂಕಿಂಗ್, ಲೋಹ, ಔಷಧ, ಕನ್‌ಸ್ಯೂಮರ್ ಡ್ಯೂರೆಬಲ್ ವಲಯದ ಷೇರುಗಳ ದರ ವೃದ್ಧಿಸಿತು. ಮೆಡ್‌ಪ್ಲಸ್ ಹೆಲ್ತ್ ಸರ್ವೀಸ್ ಷೇರು ದರ 16% ಜಿಗಿಯಿತು.
ಜಾಗತಿಕ ಮಾರುಕಟ್ಟೆ ಮಂದಗತಿಯಲ್ಲಿದ್ದರೂ, ದೇಶಿ ಮಾರುಕಟ್ಟೆ ಚೇತೋಹಾರಿಯಾಗಿತ್ತು. ಭಾರತದ ಆರ್ಥಿಕತೆ ಪ್ರಬಲ ಬೆಳವಣಿಗೆ ದಾಖಲಿಸಲಿದೆ ಎಂಬ ಮುನ್ನೋಟ ಸಕಾರಾತ್ಮಕ ಪ್ರಭಾವ ಬೀರಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors) ಮೇನಲ್ಲಿ 34,805 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.
ಅಮೆರಿಕದ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಚೇತರಿಸಿದ ಪರಿಣಾಮ ಸ್ಥಳೀಯವಾಗಿಯೂ ಸಕಾರಾತ್ಮಕ ಪ್ರಭಾವ ಬೀರಿತ್ತು. ಡಾಲರ್ ಎದುರು ರೂಪಾಯಿ 82.58 ರೂ.ಗೆ ಚೇತರಿಸಿತು. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 76.66 ಡಾಲರ್‌ನಷ್ಟಿತ್ತು.
ಇದನ್ನೂ ಓದಿ: Stock market today : ಸೆನ್ಸೆಕ್ಸ್ ಜಿಗಿತ, ಹೂಡಿಕೆದಾರರಿಗೆ 2.66 ಲಕ್ಷ ಕೋಟಿ ರೂ. ಲಾಭ