ಮುಂಬಯಿ: ಮೊಟ್ಟ ಮೊದಲ ಬಾರಿಗೆ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 64,000 ಅಂಕಗಳಿಗೆ ಜಿಗಿದಿದೆ. (stock market) ನಿಫ್ಟಿ 19,000 ಅಂಕಗಳಿಗೆ ವೃದ್ಧಿಸಿದೆ. ಅದಾನಿ ಗ್ರೂಪ್‌ನ ಕೆಲವು ಷೇರುಗಳು ಲಾಭ ಗಳಿಸಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸಾರ್ವಕಾಲಿಕ ಎತ್ತರಕ್ಕೇರಿದೆ. ಎಲ್ಲ 13 ಇಂಡೆಕ್ಸ್ ಗಳು ಲಾಭ ಗಳಿಸಿದವು. ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಸೆನ್ಸೆಕ್ಸ್ ಕಳೆದ ವಾರವೇ ಸಾರ್ವಕಾಲಿಕ ಎತ್ತರಕ್ಕೇರಿತ್ತು. ಇದೀ ನಿಫ್ಟಿ ಕೂಡ ಹಿಂಬಾಲಿಸಿದೆ.
ಕಳೆದ ಮೂರು ದಿನಗಳಲ್ಲಿ ಷೇರು ಹೂಡಿಕೆದಾರರ ಸಂಪತ್ತಿನಲ್ಲಿ 3 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ವಿದೇಶಿ ಹೂಡಿಕೆದಾರರು 2023-24ರಲ್ಲಿ ಇದುವರೆಗೆ 85,900 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.2021-22ರಲ್ಲಿ 1.4 ಲಕ್ಷ ಕೋಟಿ ರೂ. ಹಾಗೂ 37,600 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳು ಅಮೆರಿಕ ಮತ್ತು ಯುರೋಪ್‌ನಿಂದ ಗಣನೀಯ ಆದಾಯವನ್ನು ಗಳಿಸಿವೆ.
ಸೂಚ್ಯಂಕ ಜಿಗಿತಕ್ಕೆ ಕಾರಣವೇನು? ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII Buying) ಇತ್ತೀಚಿನ ಷೇರುಪೇಟೆ ರ‍್ಯಾಲಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜೂನ್ ತನಕ ಇದುವರೆಗೆ 300 ಕೋಟಿ ಡಾಲರ್‌ಗೂ ಹೆಚ್ಚು ( 24,600 ಕೋಟಿ ರೂ.) ಹಣವನ್ನು ಷೇರು ಪೇಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳುಗಳಲ್ಲಿ 11 ಶತಕೋಟಿ ಡಾಲರ್‌ಗೂ ಹೆಚ್ಚು (90,200 ಕೋಟಿ ರೂ.) ಜಾಗತಿಕ ಮಾರುಕಟ್ಟೆಯಲ್ಲಿ, ಮುಖ್ಯವಾಗಿ ಅಮೆರಿಕ ಮತ್ತು ಯುರೋಪಿನಲ್ಲಿ ಉಂಟಾಗಿರುವ ಚೇತರಿಕೆಯು ಸಕಾರಾತ್ಮಕ ಪ್ರಭಾವ ಬೀರಿತು. ಟೋಕಿಯೊ ಮತ್ತು ಹಾಂಕಾಂಗ್‌ನಲ್ಲಿ ಷೇರು ಸೂಚ್ಯಂಕ ಜಿಗಿಯಿತು.
ಇದನ್ನೂ ಓದಿ: Stock market : ಸ್ಟಾಕ್ ವ್ಯವಹಾರದಲ್ಲಿ ಅಪಾರ್ಚುನಿಟಿ ಫಂಡ್ ಏಕೆ ಅಗತ್ಯ? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಇನ್ಫೋಸಿಸ್ ನಿಫ್ಟಿಯ ರ‍್ಯಾಲಿಯಲ್ಲಿ ನಿರ್ಣಾಯಕವಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ 2,530 ರೂ.ಗೆ ಏರಿತ್ತು. ಇನ್ಫೋಸಿಸ್ ಮತ್ತು ಟಿಸಿಎಸ್ ಷೇರುಗಳ ದರವೂ ಅನುಕ್ರಮವಾಗಿ 1,293 ರೂ, ಮತ್ತು 3,227 ರೂ.ಗೆ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಕಚ್ಚಾ ತೈಲದ ದರ 2% ಇಳಿಕೆಯಾಗಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ ಕ್ಷೀಣಿಸಿದೆ. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 72.26 ಡಾಲರ್‌ಗೆ ತಗ್ಗಿದೆ. ಅಮೆರಿಕದಲ್ಲಿ ಜೂನ್‌ನಲ್ಲಿ ಕನ್‌ಸ್ಯೂಮರ್ ಕಾನ್ಫಿಡೆನ್ಸ್ ವೃದ್ಧಿಸಿದೆ.