ಮುಂಬೈ: ಷೇರು ಮಾರುಕಟ್ಟೆಯಲ್ಲಿ (Stock Market) ಚೇತರಿಕೆ ಕಂಡು ಬಂದಿದ್ದು, ಗುರುವಾರ (ಜೂನ್ 13) ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಎನ್‌ಎಸ್‌ಇ ನಿಫ್ಟಿ 110 ಅಂಕಗಳ ಜಿಗಿತದೊಂದಿದೆ 23,480.95 ಅಂಕಗಳ ಗಡಿ ತಲುಪಿದೆ. ಇತ್ತ ಸೆನ್ಸೆಕ್ಸ್ 495 ಪಾಯಿಂಟ್‌ಗಳ ಹೆಚ್ಚಳದೊಂದಿಗೆ 77,102.05 ಅಂಕ ತಲುಪಿದೆ.
ಬುಧವಾರದ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿತ್ತು. ʼʼಸೆನ್ಸೆಕ್ಸ್ ದೀರ್ಘ ಕಾಲದ ಏರಿಕೆಯೊಂದಿಗೆ ಮುಂದುವರಿಯಲಿದೆ ಎನ್ನುವ ನಿರೀಕ್ಷೆ ಇಲ್ಲ. ಯಾವ ಸಮಯದಲ್ಲಿಯಾದರೂ ಭಾರೀ ಕುಸಿತ ಕಾಣಬಹುದುʼʼ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಹಣದುಬ್ಬರ ಶೇ. 4.75ಕ್ಕೆ ಇಳಿಕೆ
ಈ ಮಧ್ಯೆ ಭಾರತದ ಹಣದುಬ್ಬರ ದರ ಶೇ. 4.75ಕ್ಕೆ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಶೇ. 4.83ರಷ್ಟಿದ್ದ ಹಣದುಬ್ಬರ ಮೇಯಲ್ಲಿ ಶೇ. 4.75ಕ್ಕೆ ಇಳಿದಿದೆ. ಕಳೆದ 12 ತಿಂಗಳ ಅವಧಿಯಲ್ಲಿ ಇದು ಅತಿ ಕಡಿಮೆ ಹಣದುಬ್ಬರ ದರ ಎನ್ನುವುದು ವಿಶೇಷ. ಆದರೆ ಹಿಂದಿನ ವರ್ಷದ ಹಿಂದಿನ ದರಕ್ಕೆ ಹೋಲಿಸಿದರೆ ಹಣುದಬ್ಬರ ಅಧಿಕವೇ ಇದೆ. 2023ರ ಮೇಯಲ್ಲಿ ಇದು ಶೇ. 4.31ರಷ್ಟಿತ್ತು. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.5ರಷ್ಟಿರಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಂದಾಜು ಮಾಡಿದೆ. ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಗುರಿ ಆರ್ಬಿಐಗಿದೆ.
ಯಥಾಸ್ಥಿತಿ ಕಾಯ್ದುಕೊಂಡ ರೆಪೋ ದರ
ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಪ್ರಕಟಿಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಮುಂದುವರಿಸಿದೆ. ಆ ಮೂಲಕ ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಆರ್‌ಬಿಐ ಸಮಾಧಾನದ ಸುದ್ದಿ ನೀಡಿದೆ. ಇಎಂಐ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸಾಲಗಾರರು ನಿರಾಳರಾಗಿದ್ದಾರೆ. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.
ಗೃಹ ಸಾಲದ ಮೇಲೆ ಪರಿಣಾಮ ಬೀರುವುದಿಲ್ಲ
ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ.
ರೆಪೋ ದರವನ್ನು ಬದಲಾಯಿಸದೆ ಇರಿಸುವುದರಿಂದ ಮನೆ ಖರೀದಿದಾರರು ನಿರಾಳರಾಗಲಿದ್ದಾರೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ವಿಶೇಷವಾಗಿ ಆಹಾರ ಹಣದುಬ್ಬರ ದರವು ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ