ಮುಂಬಯಿ: ಆರ್‌ಬಿಐ ತನ್ನ ರೆಪೊ ದರವನ್ನು ಬುಧವಾರ ಏರಿಸಿದ ಬಳಿಕ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿತು. ಬಹು ನಿರೀಕ್ಷಿತ ರೀತಿಯಲ್ಲಿ ಆರ್‌ಬಿಐ ಸಣ್ಣ ಪ್ರಮಾಣದಲ್ಲಿ ಬಡ್ಡಿ ದರವನ್ನು ಏರಿಸಿದೆ. ಈ ಹಿಂದಿನ ಏರಿಕೆಗೆ ಹೋಲಿಸಿದರೆ ಈ ಸಲ ಬಡ್ಡಿ ದರ ಏರಿಕೆಯ ಪ್ರಮಾಣ ಕಡಿಮೆಯಾಗಿದೆ. ಇದು ಹೂಡಿಕೆದಾರರನ್ನು ಉತ್ತೇಜನಗೊಳಿಸಿತು. (Stock market) ಮಧ್ಯಾಹ್ನ 1.10ಕ್ಕೆ ಸೆನ್ಸೆಕ್ಸ್ 60,668ಕ್ಕೆ ಹಾಗೂ ನಿಫ್ಟಿ 17,858ಕ್ಕೆ ಚೇತರಿಸಿತ್ತು. ಅಂತಿಮವಾಗಿ ಸೆನ್ಸೆಕ್ಸ್ ೩೭೭ ಅಂಕ ಜಿಗಿದು 60,663ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 150 ಅಂಕ ಏರಿಕೆಯಾಗಿ 17,871ಕ್ಕೆ ಸ್ಥಿರವಾಯಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆಯ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 2 ಲಕ್ಷ ಕೋಟಿ ರೂ. ವೃದ್ಧಿಸಿತು. ಆರ್‌ಬಿಐ ಯಾವುದೇ ನೆಗೆಟಿವ್ ಪರಿಣಾಮ ಬೀರುವ ನಿರ್ಣಯಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ ನಿರೀಕ್ಷೆಯಂತೆ ಷೇರು ಪೇಟೆ ಸ್ವಾಗತಿಸಿತು. ಬಿಎಸ್‌ಇ ನೋಂದಾಯಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ 266 ಲಕ್ಷ ಕೋಟಿ ರೂ.ಗಳಿಂದ 268.6 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು.
ಆರ್‌ಬಿಐ ಬುಧವಾರ ರೆಪೊ ದರದಲ್ಲಿ 0.25% ಏರಿಸಿತ್ತು. 6.50%ಕ್ಕೆ ರೆಪೊ ದರವನ್ನು ವೃದ್ಧಿಸಿತ್ತು. ಆರ್‌ಬಿಐನ ಹಣಕಾಸು ಸಮಿತಿಯಲ್ಲಿರುವ 6 ಸದಸ್ಯರಲ್ಲಿ 4 ಮಂದಿ ಬಡ್ಡಿ ದರ ಏರಿಕೆಗೆ ಅನುಮೋದಿಸಿದ್ದರು. ಕಳೆದ ನವೆಂಬರ್-ಡಿಸೆಂಬರ್‌ನಲ್ಲಿ ಹಣದುಬ್ಬರವು ಆರ್‌ಬಿಐನ ಸುರಕ್ಷತಾ ವ್ಯಾಪ್ತಿಯಾದ 2% ಮತ್ತು 6%ರ ನಡುವೆ ಬಂದಿತ್ತು. ಮುಂದಿನ ದಿನಗಳಲ್ಲಿ ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.
ಯಾರಿಗೆ ಲಾಭ-ನಷ್ಟ? ಅದಾನಿ ಎಂಟರ್‌ಪ್ರೈಸಸ್ ಷೇರು ದರ 23.13% ಚೇತರಿಸಿತು. ಅದಾನಿ ಪೋರ್ಟ್ಸ್ 9.01%, ಎಚ್‌ಡಿಎಫ್‌ಸಿ ಲೈಫ್ ಇನ್ಷೂರೆನ್ಸ್ ಷೇರು ದರ 5.25% ವೃದ್ಧಿಸಿತು. ಲಾರ್ಸನ್ & ಟೂಬ್ರೊ ಷೇರು ದರ 1.48% ನಷ್ಟಕ್ಕೀಡಾಯಿತು. ಭಾರ್ತಿ ಏರ್‌ಟೆಲ್ (1.39%) ಷೇರು ದರ ಇಳಿಯಿತು.
ಇದನ್ನೂ ಓದಿ: RBI MPC meet 2023: ರೆಪೋ ದರ 6.5%ಕ್ಕೆ ಏರಿಕೆ, ಮತ್ತಷ್ಟು ಏರಲಿದೆ ಸಾಲದ ಇಎಂಐ