Site icon Vistara News

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

Stock Market

ಮುಂಬೈ: ಅಮೆರಿಕದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸೋಮವಾರ (ಆಗಸ್ಟ್‌ 5) ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಪೇಟೆ (Stock Market) ಇಂದು (ಆಗಸ್ಟ್‌ 6) ಚೇತರಿಸಿಕೊಂಡಿದ್ದು ಮತ್ತೆ ಏರುಗತಿಯಲ್ಲಿದೆ. ಜಾಗತಿಕ ಮಾರುಕಟ್ಟೆಗಳ ಒತ್ತಡದಿಂದ ಕುಸಿದಿದ್ದ ಷೇರು ಮಾರುಕಟ್ಟೆಯಲ್ಲಿ ಲವಲವಿಕೆ ಕಂಡು ಬಂದಿದೆ. ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ (Sensex) 921 ಪಾಯಿಂಟ್ಸ್ ಅಥವಾ ಶೇ. 1.23ರಷ್ಟು ಏರಿಕೆ ಕಂಡು 79,680ಕ್ಕೆ ತಲುಪಿದರೆ ನಿಫ್ಟಿ 50 (Nifty) ಶೇ. 1.09ರಷ್ಟು ಅಥವಾ 262 ಪಾಯಿಂಟ್ಸ್ ಏರಿಕೆ ಕಂಡು 24,318 ಅಂಕಗಳ ಗಡಿ ದಾಟಿದೆ.

ಎನ್ಎಸ್ಇ (NSE)ಯಲ್ಲಿ ಟಾಟಾ ಮೋಟಾರ್ಸ್, ಲಾರ್ಸೆನ್ ಮತ್ತು ಟೂಬ್ರೊ (L&T) ಹಾಗೂ ಒಎನ್‌ಜಿಸಿ ಲಾಭ ಗಳಿಸಿದರೆ, ಎಸ್‌ಬಿಐ ಲೈಫ್, ಅಪೊಲೊ ಆಸ್ಪತ್ರೆ ಮತ್ತು ನೆಸ್ಲೆ ಇಂಡಿಯಾ ನಷ್ಟದತ್ತ ಮುಖ ಮಾಡಿದವು. ಬಿಎಸ್ಇ (BSE)ಯಲ್ಲಿ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಶೇ. 3ರಷ್ಟು ಏರಿಕೆ ಕಂಡರೆ, ಮಾರುತಿ, ಟಾಟಾ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಮೌಲ್ಯ ತಲಾ ಶೇ. 2ರಷ್ಟು ಏರಿಕೆಯಾಗಿದೆ.

ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರೂ. ಹೆಚ್ಚಳ

ಮುಂಬೈ ಷೇರುಪೇಟೆ ಬಿಎಸ್‌ಇ ಸೆನ್ಸೆಕ್ಸ್ ಮಾರುಕಟ್ಟೆ ಕ್ಯಾಪ್ ಬರೋಬ್ಬರಿ 449 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಹೂಡಿಕೆದಾರರು ಅರ್ಧ ಗಂಟೆಯಲ್ಲಿ 7 ಲಕ್ಷ ಕೋಟಿ ರೂ. ಸಂಪಾದಿಸಿದ್ದಾರೆ. ಕಳೆದ ವಹಿವಾಟಿನಲ್ಲಿ ಇದರ ಮೌಲ್ಯ 442 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈ ಮಧ್ಯೆ ಇಂದು ರೂಪಾಯಿಯ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದು, ಡಾಲರ್‌ ವಿರುದ್ಧ 83.8950ಕ್ಕೆ ತಲುಪಿದೆ.

ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿಯೂ ಚೇತರಿಕೆ

ಇತ್ತ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳಲ್ಲಿಯೂ ಚೇತರಿಕೆ ಕಂಡು ಬಂತು. ಜಪಾನ್‌ನ ಮಾರುಕಟ್ಟೆಗಳು ಅತಿ ಹೆಚ್ಚಿನ ಪ್ರಗತಿ ಸಾಧಿಸಿವೆ. ನಿಕ್ಕಿ 225 (Nikkei 225) ಶೇ. 9.87ರಷ್ಟು ಮತ್ತು ಬ್ರಾಡ್ ಬೇಸ್ಡ್ ಟೋಪಿಕ್ಸ್ (Topix) ಶೇ. 9.95ರಷ್ಟು ಏರಿಕೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ನಿಕ್ಕಿ 225 ಮತ್ತು ಟೋಪಿಕ್ಸ್ ಶೇ. 12ಕ್ಕಿಂತ ಹೆಚ್ಚು ಕುಸಿದಿದ್ದವು. ಇಂದು ಭರ್ಜರಿಯಾಗಿ ಕಂಬ್ಯಾಕ್‌ ಮಾಡಿದ ಜಪಾನ್ ಷೇರುಗಳು ತೀವ್ರವಾಗಿ ಚೇತರಿಸಿಕೊಂಡವು. ಇತ್ತ ಅಮೆರಿಕಾದ ಸ್ಟಾಕ್ ಫ್ಯೂಚರ್ಸ್‌ ಶೇ. 1ರಷ್ಟು ಏರಿಕೆಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಸೋಮವಾರದ ಮಹಾ ಕುಸಿತದಿಂದ ಚೇತರಿಕೆ

ಸೋಮವಾರ ಬಿಎಸ್‌ಇ ಸೆನ್ಸೆಕ್ಸ್ 2,393 ಪಾಯಿಂಟ್ಸ್ ಕುಸಿದು 78,588ಕ್ಕೆ ತಲುಪಿದರೆ, ನಿಫ್ಟಿ 50 ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 405 ಪಾಯಿಂಟ್ಸ್ ಕುಸಿದು 24,302 ಮಟ್ಟಕ್ಕೆ ಬಂದು ಮುಟ್ಟಿತ್ತು. ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಸದ್ಯ ಈ ಮಹಾಕುಸಿತದಿಂದ ದೇಶಿಯ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು ಹೂಡಿಕೆದಾರರು ನಿರಾಳರಾಗಿದ್ದಾರೆ. ಭಾರತ ಮಾತ್ರವಲ್ಲ ಏಷ್ಯನ್ ಮಾರುಕಟ್ಟೆಯಲ್ಲಿಯೂ ಸೋಮವಾರ ಕುಸಿತ ಕಂಡುಬಂದಿತ್ತು. ಜಪಾನ್‌ನ ನಿಕ್ಕಿ ಶೇ. 4.63 ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.58ರಷ್ಟು ಕುಸಿದಿತ್ತು. ಚೀನಾದ ಶಾಂಘೈ ಕಾಂಪೋಸಿಟ್ ಕೂಡ ಶೇ. 0.22ರಷ್ಟು ಇಳಿಕೆ ಕಂಡಿತ್ತು.

Exit mobile version