ನವದೆಹಲಿ: ರಾಮ ಮಂದಿರ (Ram Mandir) ಉದ್ಘಾಟನೆಗೊಂಡ ಮಾರನೇ ದಿನ ಕರಡಿ ಕುಣಿತಕ್ಕೆ ಭಾರತೀಯ ಷೇರುಪೇಟೆ (Indian Stock Market) ಭಾರೀ ನಷ್ಟ ಅನುಭವಿಸಿದೆ. ಮಂಗಳವಾರ ವ್ಯವಹಾರ ಆರಂಭಿಸಿದ ಸೆನ್ಸೆಕ್ಸ್ (Sensex) ತಿಂಗಳ ಕನಿಷ್ಠ ಕುಸಿತ ಕಂಡು, 1000 ಪಾಯಿಂಟ್ಸ್ ಕುಸಿತ ದಾಖಲಿಸಿತು. ಅದೇ ರೀತಿ ನಿಫ್ಟಿ (Nifty) ಕೂಡ 330 ಪಾಯಿಂಟ್ ಕುಸಿತ ಕಂಡಿದೆ. ಮಂಗಳವಾರ ಸೆನ್ಸೆಕ್ಸ್ 1,053.10 ಅಂಕ ಕುಸಿದು 70,370.55ಕ್ಕೆ ಸ್ಥಿರವಾದರೆ, ನಿಫ್ಟಿ 330.15 ಅಂಕ ಕುಸಿದು 21,241.65ಕ್ಕೆ ತಲುಪಿತು. ಸೆನ್ಸೆಕ್ಸ್ನಲ್ಲಿರುವ 30 ಕಂಪನಿಗಳ ಪೈಕಿ 25 ಷೇರುಗಳು ನಷ್ಟ ಅನುಭವಿಸಿವೆ. ಹೂಡಿಕೆದಾರರಿಗೆ (Investors) 8 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ.
ಇಂಡಸ್ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಇಂಡಿಯಾ, ಹಿಂದೂಸ್ತಾನ ಯೂನಿಲಿವರ್, ಎಚ್ಡಿಎಫ್ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಷೇರುಗಳು ಶೇ.5.97 ಕುಸಿತ ಕಂಡವು. ಇದೇ ವೇಳೆ, ಸನ್ ಫಾರ್ಮಾ, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಬಜಾಬ್ ಫಿನ್ಸರ್ವ್, ಟಿಸಿಎಸ್ ಕಂಪನಿಗಳು ಲಾಭ ತಂದುಕೊಟ್ಟಿದ್ದು, ಶೇ.4 ರಷ್ಟು ಏರಿಕೆಯನ್ನು ದಾಖಲಿಸಿದವು.
ಮಂಗಳವಾರ ಷೇರು ಪೇಟೆ ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿದರೂ ನಂತರ ನಿರಂತರಾಗಿ ಕುಸಿಯುತ್ತಾ ಹೋಯಿತು. ಫೈನಾನ್ಸ್ ಸೇರಿದಂತೆ ಮಹತ್ವದ ಕಂಪನಿಗಳ ಷೇರು ಮಾರಾಟ ಹಾಗೂ ಮಧ್ಯಮ ಮತ್ತ ಚಿಕ್ಕ ಕಂಪನಿಗಳ ಷೇರು ಕುಸಿತವು ಷೇರು ಪೇಟೆಯ ನಷ್ಟಕ್ಕೆ ಮುಖ್ಯ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಆವೇಗದ ಹೊರತಾಗಿಯೂ, ದೇಶೀಯ ಮಾರುಕಟ್ಟೆಗಳಲ್ಲಿ ಮಂಗಳವಾರ ಮಾರಾಟದ ಒತ್ತಡವಿತ್ತು. ಮುಖ್ಯವಾಗಿ ಸೆಬಿಯು, ಎಫ್ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು) ಅಂತಿಮ ಲಾಭದಾಯಕವನ್ನು ಬಿಗಿಗೊಳಿಸಿದೆ. ವಿದೇಶಿ ಹೂಡಿಕೆದಾರರ ಮಾಲೀಕತ್ವದ ನಿಯಮಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ ಎಂಬ ಸುದ್ದಿಯು ಷೇರು ಪೇಟೆಯಲ್ಲಿ ತಲ್ಲಣಕ್ಕೆ ಕಾರಣವಾಯಿತು. ಇದರಿಂದ ಷೇರು ಪೇಟೆ ಭಾರೀ ಕುಸಿತವನ್ನು ಅನುಭವಿಸಿತು.
ಈ ಸುದ್ದಿಯನ್ನೂ ಓದಿ: Stock Market: ದಾಖಲೆ ಬರೆದ ಷೇರು ಪೇಟೆ, 72,098 ಅಂಕ ತಲುಪಿದ ಸೆನ್ಸೆಕ್ಸ್!