Site icon Vistara News

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Stock Market

Stock Market

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 (807 ಪಾಯಿಂಟ್‌) ಮತ್ತು ಸೆನ್ಸೆಕ್ಸ್ ಸುಮಾರು ಶೇ. 3ರಷ್ಟು (2,622 ಪಾಯಿಂಟ್‌) ಏರಿಕೆಯಾಗಿದ್ದು, ಕ್ರಮವಾಗಿ 23,338.70 ಮತ್ತು 76,738.89ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಸುಮಾರು 360 ಸ್ಥಾನಗಳೊಂದಿಗೆ ಎನ್‌ಡಿಎ ಸ್ಪಷ್ಟ ಬಹಮತ ದೊರೆಯಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಮೇ ತಿಂಗಳಲ್ಲಿ ಮಾರುಕಟ್ಟೆಗಳ ಮೇಲೆ ಆವರಿಸಿದ್ದ ಆತಂಕವನ್ನು ನಿವಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಪ್ರಮುಖ ವಲಯಗಳು ಏರಿಕೆ ದಾಖಲಿಸಿವೆ. ಸಣ್ಣ ಮತ್ತು ಮಧ್ಯಮ ಕ್ಯಾಪ್‌ಗಳು ಸಹ ಗಮನಾರ್ಹ ಲಾಭವನ್ನು ಕಂಡಿವೆ. ಎಲ್ಲ 13 ಪ್ರಮುಖ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿದ್ದವು. ನಿಫ್ಟಿ ಎನರ್ಜಿ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ರಿಯಾಲ್ಟಿ ತಲಾ ಶೇ. 4-5ರಷ್ಟು ಏರಿಕೆ ಕಂಡಿವೆ. ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಹೆಲ್ತ್‌ಕೇರ್‌ ಎರಡೂ ಸೂಚ್ಯಂಕಗಳು ಶೇಕಡಾ 1.2ರಷ್ಟು ಏರಿಕೆಯೊಂದಿಗೆ ಅತಿ ಕಡಿಮೆ ಲಾಭವನ್ನು ದಾಖಲಿಸಿವೆ. ಏತನ್ಮಧ್ಯೆ ಬಿಎಸ್ಇಯಲ್ಲಿ ಎಲ್ಲ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ(capitalisation)ವು 11.1 ಲಕ್ಷ ಕೋಟಿ ರೂ.ಗಳಿಂದ 423.21 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು ಶೇ. 9ರಷ್ಟು ಲಾಭ ಗಳಿಸಿದವು.

“ಎಲ್ಲ ಎಕ್ಸಿಟ್‌ ಪೋಲ್‌ಗಳು ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದೆ. ಇದು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಿಮವಾಗಿ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳೊಂದಿಗೆ ಹೊಂದಿಕೆಯಾದರೆ ಸಂಭಾವ್ಯ ಏರಿಕೆಯ ಬಗ್ಗೆ ಆಶಾವಾದಿಗಳಾಗಿರಬಹುದು” ಎಂದು ಆರ್ಥಿಕ ತಜ್ಞ ಡಾ. ರವಿ ಸಿಂಗ್‌ ಹೇಳಿದ್ದಾರೆ.

ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್‌ವೆಸ್ಟರ್ಸ್‌ (Foreign institutional investors) ಮೇ 31ರಂದು 1,613.24 ಕೋಟಿ ರೂ.ಗಳ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,114.17 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದರು. ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಸೂಚಿಸಿದ ನಂತರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ 42 ಪೈಸೆ ಏರಿಕೆಯಾಗಿ 83ಕ್ಕೆ ತಲುಪಿದೆ.

ಇದನ್ನೂ ಓದಿ: Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Exit mobile version