ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಕಳೆದ 7 ವಹಿವಾಟು ದಿನಗಳಲ್ಲಿ ಸತತವಾಗಿ ಏರಿಕೆ ದಾಖಲಿಸಿದ್ದು, ಶುಕ್ರವಾರ 463 ಅಂಕ ಜಿಗಿಯಿತು. (Stock market today) ನಿಫ್ಟಿ 149 ಅಂಕ ಜಿಗಿದು 18,000 ಅಂಕಗಳ ಗಡಿಯನ್ನು ದಾಟಿತು. ಶುಕ್ರವಾರ ಹೂಡಿಕೆದಾರರ ಸಂಪತ್ತಿನಲ್ಲಿ 2.66 ಲಕ್ಷ ಕೋಟಿ ರೂ. ಲಾಭ ಗಳಿಸಿತು. ಸೆನ್ಸೆಕ್ಸ್ 61,112 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಬ್ಯಾಂಕಿಂಗ್, ಹಣಕಾಸು, ಆಟೊಮೊಬೈಲ್ ಮತ್ತು ಐಟಿ ಷೇರುಗಳು ಲಾಭ ಗಳಿಸಿತು. ಈ ವಾರ ಸೆನ್ಸೆಕ್ಸ್ 1516 ಅಂಕ ಹಾಗೂ ನಿಫ್ಟಿ 441 ಅಂಕ ಗಳಿಕೆ ದಾಖಲಿಸಿದೆ. ವಿಪ್ರೊ, ನೆಸ್ಲೆ, ಐಟಿಸಿ ಷೇರುಗಳ ದರ ಏರಿಕೆ ದಾಖಲಿಸಿತು. ಎಸ್‌ಬಿಐ, ಟೆಕ್ ಮಹೀಂದ್ರಾ, ರಿಲಯನ್ಸ್, ಭಾರ್ತಿ ಏರ್‌ಟೆಲ್ ಮತ್ತು ಕೋಟಕ್ ಬ್ಯಾಂಕ್ ಷೇರು ದರ ಏರಿಕೆ ದಾಖಲಿಸಿತು. ಮತ್ತೊಂದು ಕಡೆ ಎಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟೈಟನ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್ ನಷ್ಟ ದಾಖಲಿಸಿತು.
ವಲಯಗಳ ಲೆಕ್ಕಾಚಾರದಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ 2.45% , ನಿಫ್ಟಿ ಐಟಿ 1.29% ಚೇತರಿಸಿತು. ಬಿಎಸ್‌ಇನಲ್ಲಿ ಎಲ್ಲ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಷೇರು ಮಾರುಕಟ್ಟೆ ಮೌಲ್ಯವು ಶುಕ್ರವಾರ 271.71 ಲಕ್ಷ ಕೋಟಿ ರೂ. ಇತ್ತು. ಅಂದರೆ ಒಂದೇ ದಿನ 2.66 ಲಕ್ಷ ಕೋಟಿ ರೂ. ಏರಿತ್ತು.
ಅಲ್ಟ್ರಾ ಟೆಕ್ ಸಿಮೆಂಟ್ ಲಾಭ 36% ಇಳಿಕೆ:
ಅಲ್ಟ್ರಾ ಟೆಕ್ ಸಿಮೆಂಟ್ ಕಂಪನಿಯ ಜನವರಿ-ಮಾರ್ಚ್ ಅವಧಿಯ ನಿವ್ವಳ ಲಾಭದಲ್ಲಿ 36% ಇಳಿಕೆಯಾಗಿದೆ. ನಿವ್ವಳ ಲಾಭ 1,666 ಕೋಟಿ ರೂ.ಗೆ ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,620 ಕೋಟಿ ರೂ. ನಿವ್ವಳ ಲಾಭ ದಾಖಲಾಗಿತ್ತು. ಕಂಪನಿಯ ಆಡಳಿತ ಮಂಡಳಿಯು ಪ್ರತಿ ಷೇರಿಗೆ 38 ರೂ. ಡಿವಿಡೆಂಡ್ ಘೋಷಿಸಿದೆ.
ಸೆನ್ಸೆಕ್ಸ್, ನಿಫ್ಟಿ ಜಿಗಿತಕ್ಕೆ ಕಾರಣವೇನು?
ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಚೇತರಿಕೆ ಭಾರತೀಯ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ವಿದೇಶಿ ಹೂಡಿಕೆಯ ಒಳ ಹರಿವು ಕೂಡ ವೃದ್ಧಿಸಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Instiutional Investors) ಗುರುವಾರ 1652 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.
ಬಂಗಾರದ ದರದಲ್ಲಿ (Gold rate) ಶುಕ್ರ ವಾರ 230 ರೂ. ಇಳಿಕೆಯಾಗಿದ್ದು, 24 ಕ್ಯಾರಟ್‌ನ 10 ಗ್ರಾಮ್‌ಗೆ 60,870 ರೂ.ಗೆ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 55,800 ರೂ.ಗೆ ತಗ್ಗಿದೆ. ಬೆಳ್ಳಿಯ ದರದಲ್ಲಿ (silver rate) 200 ರೂ. ಇಳಿಕೆಯಾಗಿದ್ದು, ಪ್ರತಿ ಕೆ.ಜಿಗೆ 80,000 ರೂ.ಗೆ ತಗ್ಗಿದೆ. ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.