ಮುಂಬಯಿ: ಆರ್‌ಬಿಐ ಗರ್ವನರ್ ನೀಡಿದ ಸಕಾರಾತ್ಮಕ ಹೇಳಿಕೆಯಿಂದ ಷೇರುಪೇಟೆಗೆ ಶುಕ್ರವಾರ ಇಂಜೆಕ್ಷನ್ ನೀಡಿದಂತಾಗಿದ್ದು ಭಾರಿ ಏರಿಕೆ ಕಂಡಿತು. ನಿರೀಕ್ಷೆಯಂತೆ ಶೇ.0.50 ರಷ್ಟು ರೆಪೋ (ಬಡ್ಡಿ) ದರ ಏರಿಸಿದರೂ ಯಾವುದೇ ಅಚ್ಚರಿಯ ನಕಾರಾತ್ಮಕ ಘೋಷಣೆಗಳು (Sensex) ಗವರ್ನರ್ ಕಡೆಯಿಂದ ಬರದಿದ್ದುದರಿಂದ ಷೇರುಪೇಟೆ ಪುಟಿದೆದ್ದಿತು.
ಜಾಗತಿಕ ಷೇರುಪೇಟೆಯ ನಕಾರಾತ್ಮಕ ಅಂಶಗಳ ನಡುವೆಯೂ ಇಂದು ಸೆನ್ಸೆಕ್ಸ್ ಅಲ್ಪ ಪ್ರಮಾಣದ ಕುಸಿತದೊಂದಿಗೆ ವಹಿವಾಟು ಆರಂಭಿಸಿತು. ಆರ್ ಬಿಐ ಗರ್ವನರ್ 10 ಗಂಟೆಗೆ ಹೇಳಿಕೆ ನೀಡುವವರೆಗೂ ಹೆಚ್ಚು ಏರಿಳಿತ ಕಂಡುಬರಲಿಲ್ಲ. ಹೇಳಿಕೆ ನಂತರ ಮಾರುಕಟ್ಟೆಯ ವೇಗಕ್ಕೆ ಹಿಡಿತವೇ ಇರಲಿಲ್ಲ.
ಸೆನಕ್ಸ್ 169 ಅಂಕಗಳ ಕುಸಿತದೊಂದಿಗೆ 56240 ಕ್ಕೆ ಪ್ರಾರಂಭವಾದರೆ, ನಿಫ್ಟಿ 20 ಅಂಶಗಳ ಇಳಿಕೆಯೊಂದಿಗೆ 16798 ಕ್ಕೆ ವಹಿವಾಟು ಆರಂಭಿಸಿತು. ಬ್ಯಾಂಕ್ ನಿಫ್ಟಿ ಕೇವಲ 20 ಅಂಶಗಳ ಅಲ್ಪ ಏರಿಕೆಯೊಂದಿಗೆ 37660 ಅಂಕಗಳಿಂದ ಪ್ರಾರಂಭವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದೂ ಸಹ ಷೇರುಗಳನ್ನು ಹೆಚ್ಚಾಗಿ ಮಾರಾಟ ಮಾಡಿದರೂ ದೇಶಿ ಸಾಂಸ್ಥಿಕ ಹೂಡಿಕೆದಾರರ ಅಬ್ಬರದಿಂದ ದಿನಪೂರ್ತಿ ಷೇರುಪೇಟೆ ಏರಿಕೆಯನ್ನು ದಾಖಲಿಸಿತು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 1017 ಅಂಕಗಳ ಏರಿಕೆಯೊಂದಿಗೆ 57426 ಅಂಕಗಳಿಗೆ ಮತ್ತು ನಿಫ್ಟಿ 276 ಅಂಕ ಏರಿಕೊಂಡು, 17094 ಅಂಕಗಳಿಗೆ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 984 ಅಂಶಗಳ ಏರಿಕೆಯೊಂದಿಗೆ 38631 ಅಂಶಗಳಿಗೆ ವಾರಂತ್ಯ ಕಂಡಿತು.
ಬ್ಯಾಂಕಿಂಗ್, ರಿಯಾಲಿಟಿ, ಲೋಹ, ಸರಕು ಮತ್ತು ಸೇವಾ ವಲಯದ ಷೇರುಗಳು ಭಾರಿ ಏರಿಕೆ ಕಂಡವು. ಷೇರುಪೇಟೆಯ ಏರಿಳಿತ ಸೂಚಿಸುವ ಇಂಡಿಯಾ ವಿಕ್ಸ್ ಶೇ. 6.29 ಅಂಕಗಳ ಕುಸಿತ ದಾಖಲಿಸಿತು.
ಆರ್ ಬಿಐ ಸಭೆ ಎಫೆಕ್ಟ್
ಕಳೆದ ಎರಡು ದಿನಗಳಿಂದ ನಡೆದ ಸಭೆಯ ಫಲಿತಾಂಶವನ್ನು ಆರ್ಬಿಐ ಗರ್ವನರ್ ಇಂದು ಅನಾವರಣಗೊಳಿಸಿದರು. ನಿರೀಕ್ಷೆಯಂತೆ ಶೇ. 0.50 ರಷ್ಟು ರೆಪೋ (ಬಡ್ಡಿ) ದರ ಏರಿಸಲಾಗಿದೆ. ಇದರಿಂದ ರೆಪೋ ದರ ಶೇ. 5.90ಕ್ಕೆ ಏರಿಕೆಯಾದಂತಾಗಿದೆ. ಈ ಆರ್ಥಿಕ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 7ಕ್ಕೆ ಇರಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಗರ್ವನರ್ ತಮ್ಮ ಹೇಳಿಕೆಯಲ್ಲಿ ಭಾರತದ ಆರ್ಥಿಕ ಸ್ಥಿತಿ ಸಧ್ಯಕ್ಕೆ ಉತ್ತಮವಾಗಿದ್ದು ಯಾವುದೇ ಆತಂಕ ಇಲ್ಲ ಎಂದು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಇನ್ನೂ ಕಡಿಮೆಯಾಗಲಿದೆ ಎಂದು ಗರ್ವನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತಮ ಮಟ್ಟದಲ್ಲಿ ರೂಪಾಯಿ ಮೌಲ್ಯ
ಡಾಲರ್ ಕಳೆದ ಒಂದು ವರ್ಷದಲ್ಲಿ ಶೇ 14ರಷ್ಟು ಏರಿಕೆಯನ್ನು ದಾಖಲಿಸಿದೆ, ಇದರಿಂದ ವಿಶ್ವಾದ್ಯಂತ ಅನೇಕ ವಿಪ್ಲವಗಳು ಕಂಡಿವೆ. ಜಪಾನ್, ಆಸ್ಟ್ರೇಲಿಯಾ, ಯುರೋಪ ದೇಶಗಳು ಸೇರಿದಂತೆ ಅನೇಕ ಮುಂದುವರಿದ ದೇಶಗಳ ಕರೆನ್ಸಿ ಭಾರಿ ಕುಸಿತ ಕಂಡಿವೆ. ಆದರೆ ಆರ್ ಬಿಐನ ಸಮತೋಲಿತ ವ್ಯವಹಾರ ಮತ್ತು ಚಾಕಚಕ್ಯತೆಯಿಂದ ಭಾರತದ ರೂಪಾಯಿ ಕೇವಲ ಶೇ. 7.4 ರಷ್ಟು ಕುಸಿತ ಕಂಡಿದೆ. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದೇಶಿ ಕರೆನ್ಸಿಯಂತೆ ಭಾರತದ ರೂಪಾಯಿ ಕುಸಿತ ಕಂಡಿದ್ದರೆ ಭಾರತದ ವಿತ್ತೀಯ ಕೊರತೆ ಆತಂಕದ ಸ್ಥಿತಿಯಲ್ಲಿ ಇರುತ್ತಿತ್ತು. ದಶಕದ ಹಿಂದೆ ಇದೇ ಪರಿಸ್ಥಿತಿ ಉಂಟಾದಾಗ ಭಾರತದ ರೂಪಾಯಿ ಶೇ. 20ರಷ್ಟು ಕುಸಿತ ಕಂಡಿತ್ತು ಎಂದು ಗವರ್ನರ್ ಹೇಳಿದರು.