Site icon Vistara News

Success Story: ಉಜಾಲಾ ಮೂಲಕ ಜನಸಾಮಾನ್ಯರೂ ಹೊಳೆಯುವಂತೆ ಮಾಡಿದ ರಾಮಚಂದ್ರನ್‌ ಯಶಸ್ಸಿನ ಕಥೆ

ramachandran

ramachandran

ತಿರುವನಂತಪುರ: ಮೂಥೆದತ್ ಪಂಜನ್ ರಾಮಚಂದ್ರನ್‌ ಯಶಸ್ವಿ ಉದ್ಯಮಿ. ಹೀಗೆಂದ ಕೂಡಲೇ ಅವರು ಯಾರು ಎನ್ನುವುದು ಬಹುತೇಕರಿಗೆ ಗೊತ್ತಾಗುವುದಿಲ್ಲ. ಉಜಾಲಾ(Ujala) ಕಂಪೆನಿ ಸ್ಥಾಪಕರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಜನ ಸಾಮಾನ್ಯರ ಬದುಕಲ್ಲಿ ಉಜಾಲಾ ಬೀರಿದ ಹೊಳಪು ಅಂತಹದ್ದು. ರಾಮಚಂದ್ರನ್‌ ಅವರ ಯಶಸ್ಸಿನ ಪಯಣ ಯುವ ಜನತೆಗೆ ಸ್ಫೂರ್ತಿದಾಯಕವಾಗಲಿದೆ. ಕೇವಲ 5 ಸಾವಿರ ರೂ. ಬಂಡವಾಳದಿಂದ ಉದ್ಯಮ ಆರಂಭಿಸಿದ ಅವರು ಇಂದು ಅದನ್ನು ಸಾವಿರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನಾಗಿಸಿದ್ದಾರೆ (Success Story). ಇದರ ಹಿಂದೆ ಇದ್ದುದು ಅವರ ಶ್ರಮ, ಶ್ರದ್ಧೆ, ಸಾಧಿಸುವ ಛಲ.

ಕನಸು ನನಸು ಮಾಡುವತ್ತ ಹೆಜ್ಜೆ ಹಾಕಿದ ರಾಮಚಂದ್ರನ್

ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಸ್ಥಾಪಕ ಮತ್ತು ಅಧ್ಯಕ್ಷ ಈ ಮೂಥೆದತ್ ಪಂಜನ್ ರಾಮಚಂದ್ರನ್. ಅವರು ಅಸಂಖ್ಯಾತ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮಾದರಿ. ಅವರ ಉದ್ಯಮದ ಪಯಣವು 5,000 ರೂ.ಗಳ ಸಾಲದೊಂದಿಗೆ ಪ್ರಾರಂಭವಾಯಿತು ಎನ್ನುವುದು ವಿಶೇಷ. ಕೇರಳದ ತ್ರಿಶೂರ್‌ನ ಸೈಂಟ್‌ ಥಾಮಸ್ ಕಾಲೇಜಿನಿಂದ ಬಿ.ಕಾಂ. ಪದವಿ ಪಡೆದ ನಂತರ ರಾಮಚಂದ್ರನ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಲು ಆರಂಭಿಸಿದರು. ಅಕೌಂಟೆಂಟ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರೂ, ತಮ್ಮದೇ ಆದ ಉದ್ಯಮ ಸ್ಥಾಪಿಸುವ ಅವರ ಕನಸು ಬತ್ತಲಿಲ್ಲ. ಇದರ ಭಾಗವಾಗಿ ಅವರು ಆರಂಭದಲ್ಲಿ ಫ್ಯಾಬ್ರಿಕ್ ವೈಟ್ನರ್ ಅಭಿವೃದ್ಧಿಪಡಿಸುವತ್ತ ಯತ್ನಿಸಿದರೂ ಅದರಲ್ಲಿ ವಿಫಲರಾದರು.

ಟರ್ನಿಂಗ್ ಪಾಯಿಂಟ್‌

ಆರಂಭಿಕ ಹೆಜ್ಜೆಗಳನ್ನು ಇಡುವಾಗ ಎಡವಿದರೂ ರಾಮಚಂದ್ರನ್‌ ಧೃತಿಗೆಡಲಿಲ್ಲ.‌ ಈ ಸಮಯದಲ್ಲೇ ಅವರ ಬದುಕಿಗೊಂದು ಅನಿರೀಕ್ಷಿತ ತಿರುವು ನಿಯತಕಾಲಿಕವೊಂದರ ರೂಪದಲ್ಲಿ ಎದುರಾಯಿತು. ನೇರಳೆ ಬಣ್ಣದ ಮೂಲಕ ಬಟ್ಟೆಗೆ ಬಿಳಿ ಮತ್ತು ಹೊಳಪನ್ನು ನೀಡುವ ಮೂಲಕ ಜವಳಿ ರಂಗದಲ್ಲಿ ಕ್ರಾಂತಿಯನ್ನುಂಟು ಮಾಡಬಹುದು ಎಂದು ನಿಯತಕಾಲಿಕವೊಂದರಲ್ಲಿ ಪ್ರಸ್ತಾವಿಸಲಾಗಿತ್ತು. ಇದನ್ನು ಓದಿದ ರಾಮಚಂದ್ರನ್‌ ನೇರಳೆ ಬಣ್ಣಗಳೊಂದಿಗೆ ಪ್ರಯೋಗ ಮಾಡಲು ಒಂದು ವರ್ಷ ಮೀಸಲಿಟ್ಟರು.

ಉದ್ಯಮ ಆರಂಭಿಸಲು ಸಹೋದರನಿಂದ ಸಾಲ

ಅದರಂತೆ ರಾಮಚಂದ್ರನ್‌ ತಮ್ಮ ಕನಸಿನ ಉದ್ಯಮವನ್ನು ನನಸು ಮಾಡಲು ಕಾರ್ಯಪ್ರವೃತ್ತರಾದರು. 1983ರಲ್ಲಿ ತನ್ನ ಸಹೋದರನಿಂದ 5,000 ರೂ.ಗಳ ಸಾಲ ಪಡೆದು ತ್ರಿಶೂರ್‌ನಲ್ಲಿರುವ ತಮ್ಮ ಜಾಗದಲ್ಲಿ ಸಣ್ಣ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಿದರು. ಅದಕ್ಕೆ ತಮ್ಮ ಮಗಳು ಜ್ಯೋತಿಯ ಹೆಸರಿಟ್ಟರು. ಹೀಗೆ ಜ್ಯೋತಿ ಲ್ಯಾಬೊರೇಟರೀಸ್ ಜನ್ಮ ತಾಳಿತು. ಶುಭ್ರ ಬಿಳಿ ಬಟ್ಟೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವುದು ಅವರ ಉದ್ದೇಶವಾಗಿತ್ತು. ಅವರ ಈ ಉದ್ದೇಶವೇ ಮುಂದೆ ಉಜಾಲಾ ಸುಪ್ರೀಂ ಲಿಕ್ವಿಡ್ ಫ್ಯಾಬ್ರಿಕ್ ವೈಟ್ನರ್ ಉದಯಕ್ಕೆ ಕಾರಣವಾಯಿತು.

ಉಜಾಲಾದ ಆರಂಭಿಕ ದಿನಗಳು

ಆರಂಭದಲ್ಲಿ ಉಜಾಲಾ ಲಿಕ್ವಿಡ್ ಫ್ಯಾಬ್ರಿಕ್ ವೈಟ್ನರ್ ಅನ್ನು 6 ಮಹಿಳಾ ನೌಕರರು ಮನೆ ಮನೆಗೆ ಒಯ್ದು ಮಾರಾಟ ಮಾಡುತ್ತಿದ್ದರು. ಕ್ರಮೇಣ ಉಜಾಲಾಗೆ ಬೇಡಿಕೆ ಹೆಚ್ಚಾಗತೊಡಗಿತು. ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿತು. 1997ರ ಹೊತ್ತಿಗೆ ಈ ಉತ್ಪನ್ನವು ಭಾರತದಾದ್ಯಂತ ಗ್ರಾಹಕರನ್ನು ತಲುಪಿತು.

ಇದನ್ನೂ ಓದಿ: E-commerce jobs| ಇ-ಕಾಮರ್ಸ್‌ ಕಂಪನಿಗಳಿಂದ ಶಾಪಿಂಗ್‌ ಸೀಸನ್‌ಗೆ ಡೆಲಿವರಿ ಸಿಬ್ಬಂದಿ ನೇಮಕ ಚುರುಕು

ಏಕ-ಉತ್ಪನ್ನ ಉದ್ಯಮವಾಗಿ ಪ್ರಾರಂಭವಾದ ಜ್ಯೋತಿ ಲ್ಯಾಬ್ಸ್‌ನ ಉತ್ಪನ್ನಗಳು ಯಶಸ್ವಿಯಾಗುತ್ತಿದ್ದಂತೆ ಬಹು ಬ್ರ್ಯಾಂಡ್‌ ಸಂಸ್ಥೆಯಾಗಿ ರೂಪಾಂತರಗೊಂಡಿತು. ಇದೀಗ ಕಂಪೆನಿಯು ಏರ್ ಕೇರ್, ಡಿಟರ್ಜೆಂಟ್, ಸೊಳ್ಳೆ ಬತ್ತಿ, ಆಫ್ಟರ್‌ ವಾಶ್‌ ಲಿಕ್ವಿಟ್‌, ಸೋಪ್‌ ಮುಂತಾದ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಮಾತ್ರವಲ್ಲ ಜ್ಯೋತಿ ಲ್ಯಾಬ್ಸ್ ಜರ್ಮನ್ ಕಂಪೆನಿ ಹೆಂಕೆಲ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ. ಪ್ರಸ್ತುತ, ಕಂಪನಿಯು 13,583 ಕೋಟಿ ರೂ.ಗಳ ಬಂಡವಾಳವನ್ನು ಹೊಂದಿದೆ.

2020ರಲ್ಲಿ ರಾಮಚಂದ್ರನ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದರು. ಸದ್ಯ ಹಿರಿಯ ಮಗಳು ಎಂ.ಆರ್.ಜ್ಯೋತಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.

Exit mobile version