ನವ ದೆಹಲಿ: ನೋಟು ಅಮಾನ್ಯತೆಯ ಕ್ರಮದ ಬಗ್ಗೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ನೀಡಿರುವ ತೀರ್ಪಿನ ಬಗ್ಗೆ ರಾಜಕೀಯ ವಲಯದಲ್ಲೂ (Demonetisation verdict) ವ್ಯಾಪಕ ಚರ್ಚೆಯಾಗಿದೆ.
ಸುಪ್ರೀಂಕೋರ್ಟ್ ನೋಟು ಅಮಾನ್ಯತೆಯ ತಾಂತ್ರಿಕ ಅಂಶಗಳ ಬಗ್ಗೆ ತೀರ್ಪು ನೀಡಿದೆಯೇ, ವಿನಾ ಅದು ಸರಿಯೇ ಅಥವಾ ತಪ್ಪೇ ಎಂದು ತೀರ್ಪು ಕೊಟ್ಟಿಲ್ಲ ಎಂದು ಪ್ರತಿಪಕ್ಷಗಳು ವ್ಯಾಖ್ಯಾನಿಸಿವೆ. ಪ್ರತಿಪಕ್ಷ ನಾಯಕರ ಹೇಳಿಕೆಗಳು ಇಂತಿವೆ.
ನೋಟು ಅಮಾನ್ಯತೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ನೋಟು ಅಮಾನ್ಯತೆಯ ಗುರಿ ಈಡೇರಿದೆಯೇ ಇಲ್ಲವೇ ಎಂಬುದನ್ನು ಪ್ರಸ್ತಾಪಿಸಿಲ್ಲ. ಭಿನ್ನ ತೀರ್ಪಿನಲ್ಲಿ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು, ನೋಟು ಅಮಾನ್ಯತೆಯ ವಿಚಾರದಲ್ಲಿ ಸಂಸತ್ತನ್ನು ಬೈಪಾಸ್ ಮಾಡಲಾಗಿದೆ. ಹಾಗೆ ಮಾಡಬಾರದಿತ್ತು ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ನೋಟು ಅಮಾನ್ಯತೆಯಿಂದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಭಾರಿ ಹಾನಿಯಾಗಿತ್ತು. ಲಕ್ಷಾಂತರ ಮಂದಿ ಜೀವನೋಪಾಯವನ್ನು ಕಳೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಕೇರಳದ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಕೂಡ, ತೀರ್ಪು ಕೇವಲ ಕಾನೂನು ಮತ್ತು ತಾಂತ್ರಿಕ ಅಂಶಗಳನ್ನು ಮಾತ್ರ ಪರಿಗಣಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.