ನವ ದೆಹಲಿ: ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ಆದೇಶವೊಂದರಲ್ಲಿ ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ-2014ರ ಸಿಂಧುತ್ವವನ್ನು ಎತ್ತಿ ಹಿಡಿದಿದೆ. (EPFO) ಆದರೆ ಪಿಂಚಣಿ ನಿಧಿಗೆ ಸೇರ್ಪಡೆಯಾಗಲು ಮಾಸಿಕ 15,000 ರೂ.ಗಳ ವೇತನ ಮಿತಿಯನ್ನು ರದ್ದುಪಡಿಸಿದೆ.
2014ರ ತಿದ್ದುಪಡಿಯ ಪ್ರಕಾರ ಪಿಂಚಣಿಗೆ ಅರ್ಹ ವೇತನದ ಗರಿಷ್ಠ ಮಿತಿ ಮಾಸಿಕ 15,000 ರೂ.ಗಳಾಗಿದೆ. ಅಂದರೆ ಪಿಎಫ್‌ದಾರನ ಮಾಸಿಕ ಸಂಬಳದಲ್ಲಿ 15,000 ರೂ.ತನಕ ಮಾತ್ರ ಪಿಂಚಣಿಗೆ ಅರ್ಹತೆ ಪಡೆಯುತ್ತದೆ. ಹೆಚ್ಚಿನ ಮೊತ್ತವಿದ್ದರೆ, ಅದು ಪಿಂಚಣಿ ಲೆಕ್ಕಾಚಾರಕ್ಕೆ ಬರುವುದಿಲ್ಲ. ಈ ಹಿಂದೆ ಈ ವೇತನದ ಮಿತಿ ಮಾಸಿಕ 6,500 ರೂ. ಇತ್ತು.
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡಿದ್ದ ಪೀಠವು ಈ ತೀರ್ಪು ನೀಡಿದೆ. ಈ ಮಿತಿಯಿಂದಾಗಿ ಪಿಂಚಣಿ ನಿಧಿಗೆ ಸೇರಿಕೊಳ್ಳದವರಿಗೆ ಮತ್ತೆ ಸೇರ್ಪಡೆಯಾಗಲು ೬ ತಿಂಗಳಿನ ಅವಕಾಶ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.